ರೂ.3ಕೋಟಿ ವೆಚ್ಚದ ಕಲ್ಯಾಣಮಂಟಪ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಬಿ.ದೇವೇಂದ್ರಪ್ಪ.
ಜಗಳೂರು ಸುದ್ದಿ,
ಜಗಳೂರು,ಸೆ.8:ತಾಲ್ಲೂಕಿನ ಶ್ರೀಕ್ಷೇತ್ರ ಕೊಡದಗುಡ್ಡ ವೀರಭದ್ರೇಶ್ವರ ಸನ್ನಿಧಿಯಲ್ಲಿ ರೂ.3ಕೋಟಿ ವೆಚ್ಚದ ಕಲ್ಯಾಣ ಮಂಟಪ ನೂತನ ಕಟ್ಟಡ ಕಾಮಗಾರಿಗೆ ಶಾಸಕ ಬಿ.ದೇವೇಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು,ಈ ಹಿಂದೆ ವೀರಭದ್ರೇಶ್ವರ ಸನ್ನಿಧಾನದಲ್ಲಿ ಪಂಚಪೀಠ ಮಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಗಳ ಆಶೀರ್ವಚನದಲ್ಲಿ ನೀಡಿದ ಭರವಸೆಯಂತೆ ಶಾಸಕರ ಅನುದಾನದಲ್ಲಿ ರೂ.10 ಲಕ್ಷ ಅನುದಾನ ನೀಡುತ್ತೇನೆ. ಮತ್ತು ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರಿಗೆ ಅಗತ್ಯವಿರುವ ವ್ಯವಸ್ಥೆಯನ್ನು ವೈಯಕ್ತಿಕವಾಗಿ ಮಾಡುತ್ತೇನೆ.ನನ್ನ ಆಡಳಿತಾವಧಿಯಲ್ಲಿಯೇ ನೂತನ ಕಲ್ಯಾಣ ಮಂಟಪದ ಲೋಕಾರ್ಪಣೆಯನ್ನು ಪಂಚ ಪೀಠಾಧಿಪತಿಗಳಿಂದ ಮಾಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೆರೆಹೊರೆಯ ಭಕ್ತಸಮೂಹದ ಪವಿತ್ರ ಕ್ಷೇತ್ರದಲ್ಲಿ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ನಾನು ಸಹಾಯ ಹಸ್ತ ಚಾಚುವುದರೊಂದಿಗೆ ಜೊಳಿಗೆ ಹಾಕಿ ತನು,ಮನ ಧನದಿಂದ ದೇಣಿಗೆ ಸಂಗ್ರಹಿಸಿ ನೀಡುತ್ತೇನೆ.ನನಗೆ ಉತ್ತಮ ಆರೋಗ್ಯ ನೀಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ದಿಪಡಿಸಿ ಜನತೆಯ ಸೇವೆಗೈಯುವೆ ,ಬಿಡುವಿನ ವೇಳೆ ನಾನು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಇಟ್ಟಿಗೆ , ಮರಳು, ಮಡ್ಡಿಯನ್ನು ನೀಡುತ್ತೇನೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯ ಹಾಗೂ ದೇವಸ್ಥಾನ ಅಭಿವೃದ್ದಿ ಸಮಿತಿ ಸದಸ್ಯ ಬಸವಾಪುರ ರವಿಚಂದ್ರ ಮಾತನಾಡಿ,ಈವರೆಗೂ ಯಾವುದೇ ಶಾಸಕರ ಬಳಿ ಅನುದಾನ ಪಡೆದಿಲ್ಲ , ಭಕ್ತಾದಿಗಳೇ ದೇಣಿಗೆ ನೀಡಿ ಸಮುದಾಯ ಭವನ ಸೇರಿದಂತೆ ಇತರೆ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ.ಸ್ವಯಂಪ್ರೇರಿತವಾಗಿ ಶಾಸಕ ಬಿ.ದೇವೇಂದ್ರಪ್ಪ ರೂ.10 ಲಕ್ಷ ಅನುದಾನ ಒದಗಿಸಿ ನಮಗೆ ಆನೆ ಬಲ ತುಂಬಿದ್ದಾರೆ. ಮಾಜಿ ಶಾಸಕ ಎಸ್ .ವಿ. ರಾಮಚಂದ್ರ ಕ್ಷೇತ್ರಕ್ಕೆ ನಯ ಪೈಸೆ ಅನುದಾನ ನೀಡಲಿಲ್ಲ ಅಲ್ಲದೆ ಭಕ್ತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರೂ. 30 ಲಕ್ಷ ರೂ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಮುಂದಾದ ಅನುದಾನವನ್ನೂ ಮಾರ್ಪಾಡು ಮಾಡಿ ಬೇರೆ ಕೆಲಸಕ್ಕೆ ಬಳಸಿಕೊಂಡಿದ್ದರಿಂದ ಭಕ್ತರಿಗೆ ತೀವ್ರ ತೊಂದರೆಯಾಯಿತು.ಹಾಲಿ ಶಾಸಕ ಬಿ.ದೇವೇಂದ್ರಪ್ಪ ಅವರು ಹೈಟೆಕ್ ಶೌಚಾಲಯ ನಿರ್ಮಣಕ್ಕೆ ಅನುದಾನ ನೀಡಿದರೆ ಭಕ್ತರಿಗೆ ಅನುಕೂಲವಾಗಲಿದೆ ಎಂದು ಮನವಿಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯೆಕ್ಷೆ ರಣದಮ್ಮ ಚಂದ್ರಪ್ಪ ,ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ , ಉಪಾಧ್ಯಕ್ಷ ಚನ್ನಪ್ಪ, ಕಾರ್ಯದರ್ಶಿ ರುದ್ರಗೌಡ, ಶಿವಕುಮಾರ ಸ್ವಾಮಿ ,ಮೆದಿಗಿನಕೆರೆ ವಿರಣ್ಣ ಗೌಡ್ರು ಗ್ರಾಮ ಪಂಚಾಯತಿ ಸದಸ್ಯ ಗುರುಸ್ವಾಮಿ , ಬಂಜಾರ ಸಮುದಾಯದ ತಾಲೂಕು ಅಧ್ಯಕ್ಷ ಪುರುಷೊತ್ತಮ ನಾಯ್ಕ , ಪಿಡಿಓ ಶ್ರೀನಿವಾಸ್, ಮುಖಂಡರಾದ ಶೃಂಗೇಶ್ ,ಶಿವಕುಮಾರ್ ಸ್ವಾಮಿ, ಸೇರಿದಂತೆ ಇತರರು ಇದ್ದರು.
