ಚುನಾವಣಾ ಆಯೋಗದ ಅಧಿಸೂಚನೆಯಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ಮಾರ್ಚ್ 16 ರಿಂದಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತು ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ ಜಿಎಂ ಮಾಹಿತಿ ನೀಡಿದರು.

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಉಪಚುನಾವಣೆ ಪ್ರಯುಕ್ತ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು “ಈಗಾಗಲೇ ಮತದಾರರ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ. ಅಲ್ಲದೆ ಮತದಾನಕ್ಕೆ 10 ದಿನ ಇರುವವರೆಗೂ (ಮಾರ್ಚ್ 29) ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವ, ಹೊಸದಾಗಿ ಸೇರಿಸುವ ಅರ್ಹ ಮತದಾರರ ಹೆಸರುಗಳನ್ನು ಸೇರಿಸುವ ಅವಕಾಶವಿದೆ. ಹಾಗಾಗಿ ಅರ್ಹತೆ ಇರುವ ಎಲ್ಲರೂ ತಮ್ಮ ಮತದಾನದ ಹೆಸರುಗಳನ್ನು ಪರಿಶೀಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಬಹುದು” ಎಂದು ಸ್ಪಷ್ಟಪಡಿಸಿದರು.

“ಕ್ಷೇತ್ರದ ಮತ್ತು ದಾವಣಗೆರೆಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಅನಧಿಕೃತ ಫ್ಲೆಕ್ಸ್ ಗಳನ್ನು ಮತ್ತು ರಾಜಕೀಯ ವ್ಯಕ್ತಿಗಳ ಗಣ್ಯರ ಫೋಟೋಗಳನ್ನು ಈಗಾಗಲೇ ತೆರವುಮಾಡಲಾಗುತ್ತಿದೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಗಣ್ಯರ ರಾಜಕೀಯ ವ್ಯಕ್ತಿಗಳ ಫೋಟೋಗಳನ್ನು ಮುಚ್ಚಲಾಗುತ್ತಿದೆ. ಚುನಾವಣಾ ಸಂಬಂಧ ಕ್ಷೇತ್ರದ ಕಚೇರಿಯನ್ನು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ತೆರೆಯಲಾಗಿದೆ. ಅಲ್ಲದೇ 24*7 ವಾರ್ ರೂಂ, ಕ್ಷೇತ್ರದ ಮೇಲೆ ನಿಗಾ ವಹಿಸಲು ಮೀಡಿಯಾ ರೂಂ ಹಾಗೂ ಚುನಾವಣಾ ಸಂಬಂದ ದೂರು ಮತ್ತು ಇತರೆ ಮಾಹಿತಿ ನೀಡಲು ಕಾಲ್ ಸೆಂಟರ್ ಅನ್ನು ಕೂಡ ತೆರೆಯಲಾಗಿದೆ ಎಂದು ತಿಳಿಸಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ 12 ಚೆಕ್ ಪೋಸ್ಟ್ ಗಳಿದ್ದು ಅಬಕಾರಿ, ಕಂದಾಯ ಇಲಾಖೆ ಮತ್ತು ಚುನಾವಣಾ ಅಧಿಕಾರಿಗಳು ಸೇರಿದಂತೆ ಅಕ್ರಮ ಮಧ್ಯ, ಹಣ ಸಾಗಣೆ, ಇತರೆ ಉಡುಗೊರೆ ಸಾಗಾಟಗಳ ವಿರುದ್ಧ ನಿಗಾ ವಹಿಸಲಿದ್ದಾರೆ ಎಂದು ತಿಳಿಸಿದರು.

“ಪ್ರಚಾರಕ್ಕಾಗಿ ಯಾವುದೇ ಪ್ರಿಂಟಿಂಗ್ ಪ್ರೆಸ್ ನವರು ಅಭ್ಯರ್ಥಿಗಳಿಗೆ ಪ್ರಿಂಟ್ ಮಾಡಿಕೊಡಲು ಪರವಾನಗಿ ಪಡೆಯಬೇಕು. ಅದರ ಮಾಹಿತಿಯನ್ನು ಚುನಾವಣಾ ಅಧಿಕಾರಿಗಳಿಗೆ ನೀಡತಕ್ಕದ್ದು. ಎಸ್‌ಎಸ್‌ಟಿ, ವಿಎಸ್‌ಟಿ ಮತ್ತು ಸೆಕ್ಷನ್ ಆಫೀಸರ್ ಗಳಿಗೆ ನೇಮಕ ಮಾಡಿದ್ದು ಸೆಕ್ಷನ್ ಆಫೀಸರ್ಗಳಿಗೆ ಉಪವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಷ್ಟೇ ಅಧಿಕಾರವನ್ನು ನೀಡಲಾಗುತ್ತದೆ” ಎಂದು ತಿಳಿಸಿದರು.

“ಮಾಧ್ಯಮಗಳಲ್ಲಿ ಮತ್ತು ಡಿಜಿಟಲ್ ಮೀಡಿಯಾಗಳಲ್ಲಿ ಫೇಕ್ ನ್ಯೂಸ್ , ಪೇಯ್ಡ್ ನ್ಯೂಸ್, ಅನಧಿಕೃತ ತಪ್ಪು ಮಾಹಿತಿ ಮತ್ತು ಚುನಾವಣಾ ತಪ್ಪು ಮಾಹಿತಿ ಪ್ರಸಾರ ಮಾಡುವಂತಿಲ್ಲ. ಈ ರೀತಿ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಮತ್ತು ಪೇಯ್ಡ್ ನ್ಯೂಸ್ ಅಭ್ಯರ್ಥಿಯ ಖರ್ಚು ವೆಚ್ಚಕ್ಕೆ ಪರಿಗಣಿಸಲಾಗುವುದು. ಅಭ್ಯರ್ಥಿಯ ವೆಚ್ಚ ಮಿತಿ 40 ಲಕ್ಷಕ್ಕೆ ನಿಗದಿಪಡಿಸಲಾಗಿದೆ” ಎಂದು ತಿಳಿಸಿದರು.

“ಕ್ಷೇತ್ರದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 284 ಮತಗಟ್ಟೆಗಳಿದ್ದು ಗ್ರಾಮೀಣ ಭಾಗದಲ್ಲಿ 50 ಮತ್ತು ನಗರ ಪಾಲಿಕೆಯಲ್ಲಿ 234 ಮತಗಟ್ಟೆಗಳಿವೆ. ವ್ಯಾಪ್ತಿಯ ಅಧಿಕಾರಿಗಳು ಚುನಾವಣೆ ಮುಗಿಯುವವರೆಗೂ ಯಾವುದೇ ರಜೆ ಪಡೆಯುವಂತಿಲ್ಲ. ಕೇಂದ್ರ ಸ್ಥಾನದಲ್ಲಿರಬೇಕು. ಹೊರ ಹೋಗುವಂತಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕಿದೆ” ಎಂದು ಸ್ಪಷ್ಟಪಡಿಸಿದರು.

“ಚುನಾವಣಾ ಆಯೋಗದ ಅಧಿಸೂಚನೆಯಂತೆ ನಾಮಪತ್ರ ಸಲ್ಲಿಸಲು 2026, ಮಾರ್ಚ್ 23 ಸೋಮವಾರ ಕೊನೆಯ ದಿನವಾಗಿದ್ದು, ಮಂಗಳವಾರ ಪರಿಶೀಲನೆ ನಡೆಯಲಿದೆ. ಮಾರ್ಚ್ 26 ಗುರುವಾರ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಏಪ್ರಿಲ್ 9ರಂದು ಮತದಾನ ನಡೆಯಲಿದೆ. 2026, ಮೇ 4ರಂದು ಬೆಳಗೆ ಎಂಟರಿಂದ ದಾವಣಗೆರೆಯ ವಿಶ್ವವಿದ್ಯಾನಿಲಯದಲ್ಲಿ ಮತ ಎಣಿಕೆ ನಡೆಸಲು ಬಹುತೇಕ ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು.

“ಅಭ್ಯರ್ಥಿಗಳು ಮತದಾನಕ್ಕೆ 48 ಗಂಟೆ ಮುಂಚೆ ಬಹಿರಂಗ ಪ್ರಚಾರವನ್ನು ನಿಲ್ಲಿಸಬೇಕು ಹಾಗೂ ಅಂದೆ ಮದ್ಯಪಾನ ನಿಷೇಧಿಸಲಾಗುವುದು. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಸಾರ್ವಜನಿಕ ಔತಣಕೂಟಗಳಿಗೆ ಅವಕಾಶ ಇಲ್ಲ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಪ್ರಚಾರಕ್ಕಾಗಿ ವಾಹನಗಳ ಬಳಕೆಗೆ ಅನುಮತಿ ನೀಡಲು ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೊಳಿಸಲಾಗಿದ್ದು ಎನ್ಫೋರ್ಸ್ ಸಾಫ್ಟ್ವೇರ್ ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದು” ಎಂದು ತಿಳಿಸಿದರು.

ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಪ್ಲೈಯಿಂಗ್ ಸ್ಕ್ವಾಡ್ ಗಳಿದ್ದು ಕೇಂದ್ರ ಚುನಾವಣಾ ವೀಕ್ಷಕರರೂ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಚುನಾವಣೆ ಸಂಬಂಧ ಅವರಿಗೂ ಕೂಡ ದೂರು ಸಲ್ಲಿಸಬಹುದು. ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಈಗಾಗಲೇ ಸುಸ್ಥಿತಿಯಲ್ಲಿಟ್ಟಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಉಪಸ್ಥಿತಿಯಲ್ಲಿ ಪರಿಶೀಲಿಸಲಾಗಿದೆ. ಮತ್ತೊಮ್ಮೆ ರಾಜಕೀಯ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಪರಿಶೀಲಿಸಿ ರಿಟರ್ನಿಂಗ್ ಆಫೀಸರ್ ಗೆ ವರ್ಗಾಯಿಸಲಾಗುವುದು. ಚುನಾವಣೆಗಾಗಿ 1,400 ಸಿಬ್ಬಂದಿ ಆಗತ್ಯವಿದ್ದು ಈಗಾಗಲೇ ಸಿಬ್ಬಂದಿಗಳನ್ನು ಆಯ್ಕೆ ಮಾಡಿ ಪಟ್ಟಿ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ವಿಠ್ಠಲ ಮಾಧವರಾವ್ ಮಾತನಾಡಿ “ಈಗಾಗಲೇ ಚುನಾವಣೆಗಾಗಿ ಸ್ವೀಪ್ ಅಡಿ ಚುನಾವಣಾ ಅರಿವು ಮೂಡಿಸಲಾಗಿದೆ. ಚುನಾವಣೆಯಲ್ಲಿ ಹಣದ ಅಕ್ರಮ ಸಾಗಾಟ ತಡೆಯಲು ತಂಡ ರಚಿಸಲಾಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇದರ ಸಮಿತಿಯ ಮುಖ್ಯಸ್ಥರಾಗಿದ್ದು ಕ್ಷೇತ್ರದ ವ್ಯಾಪ್ತಿಯಲ್ಲಿ 50,000 ಕ್ಕಿಂತ ಹೆಚ್ಚು ಹಣಕ್ಕೆ ದಾಖಲೆ ಇಲ್ಲದಿದ್ದಲ್ಲಿ ಅದನ್ನು ವಶಕ್ಕೆ ಪಡೆಯಲಾಗುವುದು. ಸೂಕ್ತ ದಾಖಲೆ ಸಲ್ಲಿಸಿದರೆ ಅದನ್ನು ಹಿಂತಿರಿಸಲಾಗುವುದು” ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ತೆಕ್ಕಣ್ಣನವರ್ ಮಾತನಾಡಿ “ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ಪೊಲೀಸ್ ಠಾಣೆಗಳಿದ್ದು, ಪೊಲೀಸ್ ಸರ್ವೈಲೆನ್ಸ್ ಟೀಮ್ ಚಿಕ್ ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಚುನಾವಣಾ ಅಕ್ರಮ ತಡೆಯಲು 10 ಮೊಬೈಲ್ ಸ್ಕ್ವಾಡುಗಳನ್ನು ನಿಯೋಜಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ 72 ಕ್ರಿಟಿಕಲ್ ಪೋಲಿಂಗ್ ಸ್ಟೇಷನ್ ಗಳಿದ್ದು ಅವುಗಳ ಮೇಲೆ ನಿಗಾ ವಹಿಸಲಾಗುವುದು. ಶಾಂತಿಯುತ ಚುನಾವಣೆಗಾಗಿ ಪರವಾನಗಿ ಪಡೆದ ಶಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಲು ಎಲ್ಲರಿಗೂ ನೋಟಿಸ್ ಮತ್ತು ಮಾಹಿತಿ ನೀಡಲಾಗುವುದು” ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಡಳಿತ ತಾಲೂಕು ಆಡಳಿತ, ಕಂದಾಯ ಇಲಾಖೆ, ಚುನಾವಣಾ ಇಲಾಖೆ, ಅಬಕಾರಿ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!