ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ಹಂಚಿಕೆ ವಿಷಯದಲ್ಲಿ ವಿಳಂಬ ನೀತಿ ಸಲ್ಲದು, ಬರುವ ಏ.24ರಂದು ಕರೆದಿರುವ ವಿಶೇಷ ಸಚಿವ ಸಂಪುಟದಲ್ಲಿ ಅಂತಿಮ ನಿರ್ಧಾರ ಕೈಗೊಂಡು

24 ರಂದು ಒಳಮೀಸಲಾತಿ ಜಾರಿಗೊಳಿಸಲೇಬೇಕು

ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ತಡೆವೊಡ್ಡಬೇಕು: ಮಾಜಿ ಸಚಿವ ಎಚ್.ಆಂಜನೇಯ

24 ರಂದು ಒಳಮೀಸಲಾತಿ ಜಾರಿಗೊಳಿಸಲೇಬೇಕು

ಚಿತ್ರದುರ್ಗ: ಏ.21:
ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ಹಂಚಿಕೆ ವಿಷಯದಲ್ಲಿ ವಿಳಂಬ ನೀತಿ ಸಲ್ಲದು, ಬರುವ ಏ.24ರಂದು ಕರೆದಿರುವ ವಿಶೇಷ ಸಚಿವ ಸಂಪುಟದಲ್ಲಿ ಅಂತಿಮ ನಿರ್ಧಾರ ಕೈಗೊಂಡು ಎಸ್ಸಿಗಳಲ್ಲಿ ಮನೆ ಮಾಡಿರುವ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಗಳಿಗೆ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಎರಡು ವರ್ಷ ಆಗಿದೆ. ಈಗಾಗಲೇ ಆಂಧ್ರ, ತೆಲಂಗಾಣದಲ್ಲಿ ಜಾರಿಗೊಂಡಿದೆ. ಆದರೆ, ರಾಜ್ಯದಲ್ಲಿ ವಿಳಂಬ ಆಗುತ್ತಿರುವುದು ಸಮುದಾಯದಲ್ಲಿ ಆತಂಕ ಮೂಡಿಸಿದೆ ಎಂದರು.

ಈ ಮಧ್ಯೆ ತೋಟಗಾರಿಕೆ ಇಲಾಖೆ ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದ್ದು, ಇದು ಇನ್ನಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಬಹಳ ಸಂಖ್ಯೆಯಲ್ಲಿ ಮಾದಿಗ ಸಮುದಾಯದವರು ನನ್ನೊಂದಿಗೆ ಚರ್ಚೆ ವೇಳೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ತೀರ್ಪು ಬಳಿಕ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೆ ಬದ್ಧವೆಂಬ ಹೇಳಿಕೆ ಜೊತೆಗೆ, ಜಾರಿಗೊಳ್ಳುವವರೆಗೂ ಉದ್ಯೋಗ ನೇಮಕಾತಿಗೆ ತಡೆ ನೀಡಿ ಆದೇಶಿಸಿದ್ದರು. ಆದರೆ, ಸಿಎಂ ಅವರ ಆದೇಶ ಉಲ್ಲಂಘಿಸಿ ಕೃಷಿ ಇಲಾಖೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದು ಸರಿಯಲ್ಲ. ಈ ನಡೆ ಅಕ್ಷಮ್ಯ ಅಪರಾಧ ಆಗಲಿದೆ. ಆದ್ದರಿಂದ ಕೂಡಲೇ ಪ್ರಕ್ರಿಯೆ ಹಿಂಪಡೆಯಬೇಕು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ನಿಯೋಗ ತೆರಳಲಾಗುವುದು ಎಂದು ತಿಳಿಸಿದರು.

ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿ ನೀಡಿದ ಬಳಿಕ ಸರ್ಕಾರ ಕೆಲ ಬದಲಾವಣೆಯೊಂದಿಗೆ ಶೇ.17ರ ಮೀಸಲಾತಿಯಡಿ ಪರಿಶಿಷ್ಟ ಸಮುದಾಯಗಳನ್ನು ಮೂರು ವರ್ಗಗಳನ್ನಾಗಿಸಿ ಎ-6, ಬಿ-6, ಸಿ ಗುಂಪಿಗೆ 5ರಷ್ಟು ಮೀಸಲಾತಿ ಹಂಚಿಕೆ ಮಾಡಲಾಯಿತು. ಆದರೆ, ಮೀಸಲಾತಿ ಹೆಚ್ಚಳ ಸಂಬಂಧ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮೀಸಲಾತಿಯನ್ನು ಶೇ.15ರಡಿ ಮರು ಹಂಚಿಕೆ ಮಾಡಬೇಕಾಗಿದೆ. ಈ ಕಾರಣಕ್ಕೆ ವಿಳಂಬ ಆಗಿದೆ ಎಂದರು.

ಎಲ್ಲ ಆಯೋಗಗಳು ಮಾದಿಗ ಸಮುದಾಯ ಅತ್ಯಂತ ಹಿಂದುಳಿದಿದ್ದು ಶೇ.6 ಮೀಸಲಾತಿ ನೀಡಬೇಕೆಂದು ವರದಿ ನೀಡಿವೆ. ಅದ್ದರಿಂದ ಶೇ.15ರಡಿ ಹಂಚಿಕೆ ವೇಳೆಯೂ ಆಯೋಗಗಳ ವರದಿಯಂತೆ ನಮಗೆ ಹೆಚ್ಚು ಪಾಲು ನೀಡಬೇಕು. ಸಾಮಾಜಿಕ ನ್ಯಾಯದಡಿ ಅಲೆಮಾರಿ ಗುಂಪಿಗೆ ಪ್ರತ್ಯೇಕವಾಗಿ ಶೇ.1 ಮೀಸಲಾತಿ ನೀಡುವುದು ನ್ಯಾಯಸಮ್ಮತ ನಿರ್ಧಾರವಾಗಲಿದೆ ಎಂದು ತಿಳಿಸಿದರು.

ದಾವಣಗೆರೆ-ಬಾಗಲಕೋಟೆ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಕಾರಣಕ್ಕೆ ಮುಂದೂಡಲಾಗಿತ್ತು. ಈ ವೇಳೆಯೂ ಕೆಲವರು ಅಪಪ್ರಚಾರ ನಡೆಸಿದರು. ಆದರೆ, ಮಾದಿಗ ಸಮುದಾಯದ ಕಾಂಗ್ರೆಸ್ ನಾಯಕರು ಆರೋಪಗಳಿಗೆ ತಡೆವೊಡ್ಡಿದೇವು. ಈಗ ನಿರೀಕ್ಷೆಯಂತೆ ವಿಶೇಷ ಸಚಿವ ಸಂಪುಟ ಸಭೆಯನ್ನು ಏ.24ರ ಶುಕ್ರವಾರ ಕರೆಯಲಾಗಿದ್ದು, ಈ ಸಭೆಯಲ್ಲಿಯೇ ಅಂತಿಮ ನಿರ್ಧಾರ ಕೈಗೊಂಡು ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ಒತ್ತಾಯಿಸಿದರು.

ಅನೇಕ ಒತ್ತಡಗಳ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಷಿತ ಜನರ ಧ್ವನಿಯಾಗಿ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಅವರ ಕುರಿತು ನಮಗೆ ಅದಮ್ಯ ವಿಶ್ವಾಸ, ನಂಬಿಕೆ ಇದೆ. ಬರುವ ಸಚಿವ ಸಂಪುಟದಲ್ಲಿ ಶೇ.15ರಡಿ ಮೀಸಲಾತಿ ಹಂಚಿಕೆ ಮಾಡುವ ಮೂಲಕ ಪರಿಶಿಷ್ಟ ಗುಂಪಿನ ಎಲ್ಲ ಜಾತಿಗಳಿಗೆ ನ್ಯಾಯ ಕಲ್ಪಿಸಲಿದ್ದಾರೆ ಎಂದರು.

ವಿವಿಧ ಕಾರಣಕ್ಕೆ ಮುಂದೂಡುತ್ತಲೇ ಇರುವ ಒಳಮೀಸಲಾತಿಗೆ ಏ.24ರ ವಿಶೇಷ ಸಚಿವ ಸಂಪುಟದಲ್ಲಿ ಆಗಲೇಬೇಕು. ಈ ಸಂಬಂಧ ಸಿದ್ದರಾಮಯ್ಯ ಕೂಡ ನಮಗೆ ಭರವಸೆ ನೀಡಿದ್ದಾರೆ.
ಎರಡು ವರ್ಷಗಳ ಕಾಲ ಒಳಮೀಸಲಾತಿ ಕಾರಣಕ್ಕೆ ಉದ್ಯೋಗ ನೇಮಕಾತಿಗೆ ತಡೆ ನೀಡಿರುವ ಕಾರಣ ಬಹಳಷ್ಟು ವಿದ್ಯಾವಂತ ಯುವಕರು ಹುದ್ದೆಗಳಿಗೆ ಅರ್ಜಿ ಕರೆಯುವುದನ್ನೇ ಕಾಯುತ್ತಿದ್ದಾರೆ. ಆದ್ದರಿಂದ ಮತ್ತಷ್ಟು ವಿಳಂಬ ಮಾಡುವುದರಿಂದ ಬೇರೆ ಸಮುದಾಯದ ಯುವಪೀಳಿಗೆಗೆ ಅನ್ಯಾಯ ಆಗಲಿದೆ ಎಂದರು.

ಮೂರುವರೆ ವರ್ಷಗಳ ಕಾಲ ಹೋರಾಟದ ಹಾದಿ ಸವಿಸಿದ ಮಾದಿಗ ಸಮುದಾಯಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಸತ್ತ ಜನರನ್ನು ಬದುಕಿಸಿದಂತೆ ಆಗಿದೆ. ಜೊತೆಗೆ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಈಗಾಗಲೇ ಒಳಮೀಸಲಾತಿ ಜಾರಿಗೊಂಡಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಅನುಷ್ಠಾನಗೊಂಡಿದೆ. ಈಗ ಉದ್ಯೋಗ ಕ್ಷೇತ್ರಕ್ಕೆ ಅಳವಡಿಸಲು ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಕೃಷಿ ಇಲಾಖೆ ಅಧಿಕಾರಿಗಳ ಹುದ್ದೆಗಳಿಗೆ 10 ವರ್ಷಗಳ ಬಳಿಕ ಅರ್ಜಿ ಆಹ್ವಾನಿಸಲಾಗಿದೆ. ಈ ಅವಕಾಶ ಸಿಗಬೇಕಾದರೆ ಮತ್ತೇ 10 ವರ್ಷ ಕಾಯಬೇಕಾಗುತ್ತದೆ. ಈ ವಿಷಯದಲ್ಲಿ ಮಾದಿಗರ ಕಣ್ಣೀರು ಹಾಕುತ್ತಿದ್ದಾರೆ. ಆದ್ದರಿಂದ ತಕ್ಷಣವೇ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಬೇಕು. ಒಳಮೀಸಲಾತಿ ಜಾರಿ ಬಳಿಕ ಅರ್ಜಿ ಆಹ್ವಾನಿಸಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!