ಬಿಎಸ್‌ವೈ ಮುಂದಿಟ್ಟು ಮತಯಾಚನೆ ಅನುಕಂಪವಲ್ಲವೆ; ಸಿದ್ದರಾಮಯ್ಯ ಸವಾಲು
ಶುಕ್ರದೆಸೆ ನ್ಯೂಸ್:- ಚುನಾವಣೆ 2023ರಾಜಕೀಯ ರಾಜ್ಯ
ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ
ಓಟದ ಸ್ಪರ್ಧೆಗೆ ಆಗಮಿಸುವಂತೆ ಮೋದಿಗೆ ಆಹ್ವಾನ
ಪ್ರಧಾನಿ ನರೇಂದ್ರ ಮೋದಿ ಅವರು ನನ್ನೊಂದಿಗೆ ಓಟದ ಸ್ಪರ್ಧೆಗೆ ಬರಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ. ಅಲ್ಲದೆ, ಅನುಕಂಪದ ಮತಯಾಚನೆ ಎಂದು ತಮ್ಮನ್ನು ಟೀಕಿಸಿದ ಮೋದಿ ಅವರಿಗೆ ಬಿ ಎಸ್ ಯಡಿಯೂರಪ್ಪ ಅವರನ್ನು ನೆನಪಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಜ್ಯ ಪ್ರವಾಸದಲ್ಲಿದ್ದಾರೆ. ವಿಜಯಪುರದ ಬೃಹತ್ ಸಮಾವೇಶದ ವೇಳೆ ಮಾತನಾಡಿರುವ ಮೋದಿ, “ಸಿದ್ದರಾಮಯ್ಯ ಅವರು ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳುವ ಮೂಲಕ ಅನುಕಂಪದಿಂದ ಮತ ಗಳಿಸುವ ಕುತಂತ್ರ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಮೋದಿ ಅವರ ಹೇಳಿಕೆ ಕುರಿತು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರ ಜೊತೆಗೆ ತಾವು ರಸ್ತೆ ಮೇಲೆ ಓಡಿರುವ ವಿಡಿಯೋ ಹಂಚಿಕೊಂಡು ಸವಾಲು ಹಾಕಿದ್ದಾರೆ.
“ನಾನು ನಿವೃತ್ತಿಯಾಗುತ್ತೇನೆ ಎಂದು ಹೇಳುತ್ತಿರುವುದು ಚುನಾವಣಾ ರಾಜಕಾರಣದಿಂದಲೇ ಹೊರತು, ಸಕ್ರಿಯ ರಾಜಕಾರಣದಿಂದ ಅಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿರುವಷ್ಟು ಆರೋಗ್ಯದಿಂದ ಇದ್ದೇನೆ. ನರೇಂದ್ರ ಮೋದಿ ಅವರು ಸಿದ್ಧವಿದ್ದರೆ ಅವರ ಜೊತೆಯಲ್ಲಿ ಓಟದ ಸ್ಪರ್ಧೆಗೆ ನಾನು ಸಿದ್ಧ” ಎಂದು ಟ್ವೀಟ್ ಮಾಡಿದ್ದಾರೆ.
“ಪ್ರಧಾನಿ ಮೋದಿ ಅವರು ಏನನ್ನು ಹೇಳಲಿಕ್ಕೆ ಹೊರಟಿದ್ದಾರೆ? ಬಿ ಎಸ್ ಯಡಿಯೂರಪ್ಪನವರನ್ನು
ವಯಸ್ಸಿನ ಕಾರಣಕ್ಕಾಗಿ ಮುಖ್ಯಮಂತ್ರಿ ಸ್ಥಾನದಿಂದ ಅವಮಾನಕಾರಿಯಾಗಿ ಕಿತ್ತುಹಾಕಿದ ಬಿಜೆಪಿ, ಈಗ ಅವರನ್ನೇ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿರುವುದಕ್ಕೆ ಕಾರಣ ಅವರ ಮೇಲಿನ ಗೌರವವೇ? ಅಥವಾ ಅನುಕಂಪ ಗಳಿಕೆಯ ತಂತ್ರವೇ?” ಎಂದು ಪ್ರಶ್ನಿಸಿದ್ದಾರೆ.