ಕಳೆದ ಎರಡು ವರ್ಷಗಳಿಂದ 2000 ಮುಖಬೆಲೆಯ ನೋಟ್ ಮುದ್ರಿಸದಿರೋದು ಯಾಕೆ ಗೊತ್ತಾ?
ಅದು 2016ರ ನವೆಂಬರ್ 8ರ ರಾತ್ರಿ. ಪ್ರಧಾನಮಂತ್ರಿ ನರೇಂದ್ರಮೋದಿಯವರು 500 ಹಾಗೂ 1000 ರೂಪಾಯಿ ಮುಖಬೆಲೆಯೆ ನೋಟ್ ಗಳನ್ನು ಬ್ಯಾನ್ ಮಾಡಲಾಗಿದ್ದು, ಈ ಕ್ಷಣದಿಂದಲೇ ಅವುಗಳ ಚಲಾವಣೆಯನ್ನು ಬಂದ್ ಮಾಡಲಾಗಿದೆ ಎಂದು ಆದೇಶ ಹೊರಡಿಸುತ್ತಿದ್ದಂತೆ ಅದೆಷ್ಟೋ ಮಂದಿಯ ಎದೆಯಲ್ಲಿ ಢವ ಢವ ಶುರುವಾಗಿ ಹೋಗಿತ್ತು. ದೊಡ್ಡ ಮುಖಬೆಲೆಯ ನೋಟ್ ಗಳು ಬ್ಯಾನ್ ಆಗುತ್ತಿದ್ದಂತೆ ಹೊಸದಾಗಿ ಚಲಾವಣೆಗೆ ಬಂದಿದ್ದು, 2000 ಮುಖಬೆಲೆಯ ನೋಟುಗಳು. ಈ ನಡುವೆ ನೋಟ್ ಬ್ಯಾನ್ ಆಗಿ ಸರಿಸುಮಾರು 4 ವರ್ಷಗಳೆ ಕಳೆದಿದೆ. ಇದಾದ ಬಳಿಕ 2000 ಮುಖಬೆಲೆಯ ನೋಟ್ ಗಳ ಚಲಾವಣೆ ಸಿಕ್ಕಾಪಟ್ಟೆ ಕಡಿಮೆಯಾದಂತೆ ಕಾಡಿಸುತ್ತಿದೆ. ಈ ಬಗ್ಗೆ ಚರ್ಚೆಗಳು ಆರಂಭವಾಗಿ, 2000 ಮುಖಬೆಲೆಯ ನೋಟ್ ಗಳು ಕೂಡ ಬ್ಯಾನ್ ಆಗಲಿದೆ ಎಂಬ ಗಾಳಿಸುದ್ದಿಯೊಂದು ಹರಿದಾಡಿದ್ದು ಇದೆ. ಇದನ್ನು ಕೇಂದ್ರ ಸರ್ಕಾರ ನಿರಾಕರಿಸಿತ್ತು ಕೂಡ. ಈ ನಡುವೆ 2019-20 ಹಾಗೂ 2020-21ನೇ ಸಾಲಿನಲ್ಲಿ 2000 ಮುಖಬೆಲೆಯ ನೋಟು ಗಳನ್ನು ಮುದ್ರಿಸಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಚಲಾವಣೆ ವಿರಳ..!
ಕಳೆದ ಎರಡು ವರ್ಷಗಳಿಂದ 2000 ಮುಖಬೆಲೆಯ ನೋಟುಗಳ ಮುದ್ರಣ ಮಾಡಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ನೋಟುಗಳ ಚಲಾವಣೆ ತೀವ್ರ ವಿರಳವಾಗಿರುವುದರಿಂದ ನೋಟುಗಳ ಮುದ್ರಣದ ಕುರಿತಂತೆ ಆರ್ ಬಿಐ ಜೊತೆಗೆ ಸಮಾಲೋಚನೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಅನುರಾಗ್ ಠಾಕೂರ್ ಲೋಕಸಭೆಗೆ ತಿಳಿಸಿದ್ದಾರೆ.
2 ಸಾವಿರ ಮುಖಬೆಲೆಯ ನೋಟುಗಳು ಬಹಳ ವಿರಳವಾಗಿ ಲಭ್ಯವಾಗುತ್ತಿದೆಯ ಬ್ಯಾಂಕ್ ಮತ್ತು ಎಟಿಎಂಗಳಲ್ಲೂ ಇದರ ಪ್ರಮಾಣ ಕಡಿಮೆಯಾಗಿದ್ದು, ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಎಂಡಿಎಂಕೆ ಸಂಸದ ಎ.ಗಣೇಶಮೂರ್ತಿ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಠಾಕೂರ್, 2020ರ ಚಲಾವಣೆಯಲ್ಲಿ ಚಲಾವಣೆಯಲ್ಲಿ 2000 ರೂಪಾಯಿ ನೋಟು ಕೇವಲ ಶೇ.35ರಷ್ಟು ಮಾತ್ರ ಚಲಾವಣೆಗೊಂಡಿರುವುದಾಗಿ ವಿವರಣೆ ನೀಡಿದರು.