2023May19ದಲಿತ, ಶೋಷಿತ, ಅಲಕ್ಷಿತ ಸಮುದಾಯಗಳ ನಾಯಕ ಹೆಚ್.ಆಂಜನೇಯ ಅವರಿಗೆ ಸಚಿವ ಸ್ಥಾನ ನೀಡಿ…
PoliticsStories ಶುಕ್ರದೆಸೆ ವೆಬ್ ನ್ಯೂಸ್. ಚಿತ್ರದುರ್ಗ ರಾಜ್ಯ
ದಲಿತ, ಶೋಷಿತ, ಅಲಕ್ಷಿತ ಸಮುದಾಯಗಳ ನಾಯಕ ಹೆಚ್.ಆಂಜನೇಯ ಅವರಿಗೆ ಸಚಿವ ಸ್ಥಾನ ನೀಡಿ…
ದಲಿತ, ಶೋಷಿತ, ಅಲಕ್ಷಿತ ಸಮುದಾಯಗಳ ನಾಯಕ ಹೆಚ್.ಆಂಜನೇಯ ಅವರಿಗೆ ಸಚಿವ ಸ್ಥಾನ ನೀಡಿ…
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಅತ್ಯಲ್ಪ ಮತಗಳ ಅಂತರದಿಂದ ಸೋತಿರುವ, ದಲಿತ, ಶೋಷಿತ, ಅಲಕ್ಷಿತ ಸಮುದಾಯಗಳ ನಾಯಕ ಮಾಜಿ ಸಚಿವ ಹೆಚ್.ಆಂಜನೇಯರವರನ್ನು ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಎಂ.ಎಲ್.ಸಿ.ಯನ್ನಾಗಿ ನೇಮಕ ಮಾಡಿ ಸಚಿವ ಸ್ಥಾನ ನೀಡುವಂತೆ ಸಾಮಾಜಿಕ ಸಂಘರ್ಷ ಸಮಿತಿ ಹಾಗೂ ವಿವಿಧ ಸಮುದಾಯಗಳ ಮುಖಂಡರುಗಳು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದಾರೆ.

ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಸಿ.ಕೆ.ಮಹೇಶ್ ಮಾತನಾಡಿ, ಮಾಜಿ ಸಚಿವ ಆಂಜನೇಯ ಅವರು ಶೋಷಿತ ತಳ ಸಮುದಾಯಗಳ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದು ಧ್ವನಿ ಇಲ್ಲದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವ ಮೂಲಕ 2ನೇ ಅಂಬೇಡ್ಕರ್ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಇವರ ಸೋಲು ಮಾದಿಗ ಸಮಾಜ ಸೇರಿದಂತೆ ಅಲಕ್ಷಿತ ಸಮುದಾಯಗಳಿಗೆ ಸಾಕಷ್ಟು ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
2013ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಆಂಜನೇಯ ಅವರು ಕ್ರಾಂತಿಕಾರ ಬದಲಾವಣೆ ತಂದಿದ್ದಾರೆ. ಎಸ್ಸಿ, ಎಸ್ಟಿ ಅನುದಾನ ಕಾಯ್ದೆ ಜಾರಿ, ಗುತ್ತಿಗೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ಮೂಲಕ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸಿ, ಎಸ್ಟಿ, ಅಲೆಮಾರಿ, ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ನೂರಾರು ಹೈಟೆಕ್ ಹಾಸ್ಟೆಲ್ ಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ತನ್ನದೇ ಆದ ಕೊಡುಗೆಯನ್ನು ಆಂಜನೇಯ ಅವರು ನೀಡಿದ್ದಾರೆಂದು ಅವರು ತಿಳಿಸಿದ್ದಾರೆ.
ಹೊಳಲ್ಕೆರೆ ಕ್ಷೇತ್ರದ ಹೆಚ್.ಆಂಜನೇಯ ಗೆಲ್ಲಬೇಕಿತ್ತು. ಪಕ್ಷದಲ್ಲಿನ ಕೆಲವು ಕುತಂತ್ರಿಗಳಿಂದ ಸೋತರು. ಹಾಗಾಗಿ ದಲಿತ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಬೇಕಾಗಿರುವುದರಿಂದ ಹೆಚ್.ಆಂಜನೇಯರವರನ್ನು ಮಂತ್ರಿಯನ್ನಾಗಿ ಮಾಡಿಕೊಂಡು ನಂತರ ಎಂ.ಎಲ್.ಸಿ.ಯನ್ನಾಗಿ ನೇಮಿಸಿಕೊಳ್ಳಬೇಕೆಂದು ಅವರು ಕಾಂಗ್ರೆಸ್ ವರಿಷ್ಠರುಗಳಲ್ಲಿ ಆಗ್ರಹಿಸಿದರು.
ಲೇಖಕ ಹೆಚ್.ಆನಂದ್‌ಕುಮಾರ್ ಮಾತನಾಡಿ ಹೆಚ್.ಆಂಜನೇಯ ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ. ಆದರೂ ದೊಡ್ಡ ಸಮುದಾಯ ದಲಿತರಿಗೆ ಫಲ ಸಿಗಬೇಕಾದರೆ ಅವರನ್ನು ಎಂ.ಎಲ್.ಸಿ.ಯನ್ನಾಗಿ ಮಾಡಿ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ವಿನಂತಿಸಿದರು.

ದಲಿತರು, ಇತರೆ ಹಿಂದುಳಿದ ಸಮಾಜವರಿಗೆ ಸಾಮಾಜಿಕ ನ್ಯಾಯ ನೀಡಲು ಮತ್ತೊಮ್ಮೆ ಆಂಜನೇಯ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನೇ ದಯಪಾಲಿಸುವ ಮೂಲಕ 2013-18ರ ಸರ್ಕಾರದ ಅವಧಿಯಲ್ಲಿ ಮಾಡದೇ ಇದ್ದ ಕೆಲವು ಮಹತ್ವದ ಕಾರ್ಯಗಳನ್ನು ಆಂಜನೇಯ ಅವರು ಪೂರ್ಣಗೊಳಿಸಬೇಕಾಗಿದೆ. ಅಲ್ಲದೆ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಂಜನೇಯವರನ್ನು ನಾಳೆಯೇ ಸಚಿವರನ್ನಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಕಾಂಗ್ರೆಸ್ ವರಿಷ್ಠರು ಆದೇಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೈಲಮ್ಮ ಮಾತನಾಡಿ ಸಣ್ಣ ಸಣ್ಣ ಸಮುದಾಯಗಳಿಗೆ ಸ್ಪೂರ್ತಿದಾಯಕರಾಗಿದ್ದ ಹೆಚ್.ಆಂಜನೇಯರವರ ಸೋಲು ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಯಾರೂ ನಿರೀಕ್ಷಿಸಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು. ಹಾಗಾಗಿ ಹೆಚ್.ಆಂಜನೇಯರವರಿಗೆ ಸಿದ್ದರಾಮಯ್ಯನವರ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ನಾಯಕರುಗಳನ್ನು ಕೋರಿದರು.

ಕೆ.ಕುಮಾರ್, ಹೊಳೆಯಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!