ನಾಳೆ ಸರ್ಕಾರಿ ಶಾಲೆ, ಕಾಲೇಜುಗಳು ಸೇರಿದಂತೆ ಹಲವು ಕಚೇರಿಗಳು ಬಂದ್.?
ಜನಸ್ಪಂದನ ನ್ಯೂಸ್, ಬೆಂಗಳೂರು : ಸರ್ಕಾರಿ ನೌಕರರು ಕೂಡಲೇ ಏಳನೇ ವೇತನ ಆಯೋಗದ ವರದಿಯನ್ನು ಅನುಷ್ಠಾನ ಮಾಡುವುದು ಹಾಗೂ ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ ಹಳೆಯ ವ್ಯವಸ್ಥೆಯನ್ನೇ ಮುಂದುವರೆಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಾಳೆಯಿಂದ ಕಚೇರಿಯನ್ನು ಬಂದ್ ಮಾಡಿ ಅರ್ನಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.
ಇದರಿಂದಾಗಿ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದ್ದು, ಕಚೇರಿಗೆ ಬರುವ ನೌಕರರನ್ನು ತಡೆ ಹಿಡಿಯುವುದು ಇಲ್ಲವೇ ಬಲವಂತವಾಗಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕೆಂದು ಯಾವುದೇ ಸಂಘಟನೆಗಳು ಒತ್ತಡ ಹೇರಬಾರದೆಂದು ರಾಜ್ಯ ಸರ್ಕಾರ ಎಚ್ಚರಿಕೆ ಕೊಟ್ಟಿದೆ.
ನೌಕರರ ಮುಷ್ಕರದಿಂದಾಗಿ ನಾಳೆಯಿಂದ ಶಾಲಾ, ಕಾಲೇಜು, ಕಚೇರಿ, ಆಸ್ಪತ್ರೆ ಬಂದ್ ಆಗುವ ಸಾಧ್ಯತೆ ಇದೆ. ಕೆಲವು ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಗ್ರಾಮ ಪಂಚಾಯಿತಿ ನೌಕರರು, ಪುರಸಭೆ, ನಗರಸಭೆ, ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆ ಪೌರಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವುದರಿಂದ ಸ್ವಚ್ಛತೆ ಇತರೆ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಶಾಲಾ, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಕೆಲಸಕ್ಕೆ ಗೈರುಹಾಜರಾಗಿ ಮುಷ್ಕರದಲ್ಲಿ ಭಾಗವಹಿಸುವುದರಿಂದ ಪ್ರಾಥಮಿಕ ಶಾಲೆಗಳಿಂದ ಪದವಿ ಕಾಲೇಜುಗಳವರೆಗೆ ತರಗತಿಗಳು ನಡೆಯುವ ಸಾಧ್ಯತೆ ಇಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಆಸ್ತಿ ನೋಂದಣಿ ಕಾರ್ಯಕ್ಕೆ ಹಿನ್ನಡೆಯಾಗಲಿದೆ.
ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಘಟಕ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಲಿದ್ದು, ಹೊರ ರೋಗಿಗಳ ಸೇವೆ ಇರುವುದಿಲ್ಲ. ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆ, ಕಾರ್ಯ ಚಟುವಟಿಕೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಸರ್ಕಾರಿ ಸೇವೆಯಲ್ಲಿ ವ್ಯತ್ಯಯ:
ವಿಧಾನಸೌಧದ ಎಲ್ಲಾ ಕಚೇರಿಗಳು, ಸಚಿವಾಲಯದ ಕಛೇರಿಗಳು, ಬಿಬಿಎಂಪಿ ಕಚೇರಿ, ಬೆಸ್ಕಾಂ, ಬಿಡಬ್ಲ್ಯೂಎಸ್‍ಎಸ್ ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಛೇರಿ, ಪುರಸಭೆ ಕಛೇರಿ, ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆ (ಐಸಿಯು, ಎಂಐಸಿಯು ಹೊರತುಪಡಿಸಿ), ಕಂದಾಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪುರಸಭೆ, ಸರ್ಕಾರಿ ಹಾಸ್ಟೆಲ್‍ಗಳು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಜಲಮಂಡಳಿ, ಬಿಬಿಎಂಪಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಂದ್ ಆಗಲಿವೆ.