ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಬಿಜೆಪಿಯ ಮಾಜಿ ಶಾಸಕ ಬಂಧನ


ಮಣಿಪುರದ ಇಂಫಾಲ್‌ನಲ್ಲಿ ಪುನಃ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿಯ ಮಾಜಿ ಶಾಸಕ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್‌ ತಿಳಿಸಿದ್ದಾರೆ.

ಹದಿನೈದು ದಿನಗಳ ಹಿಂದೆ ಕನಿಷ್ಠ 71 ಜನರು ಸಾವನ್ನಪ್ಪಿದ ಮತ್ತು 35,000 ಜನರು ಸ್ಥಳಾಂತರಗೊಂಡ ಕಲಹ ಪೀಡಿತ ರಾಜ್ಯದಲ್ಲಿ ಮತ್ತೊಮ್ಮೆ ಹಿಂಸಾಚಾರಕ್ಕೆ ಪ್ರಚೋದಿಸುವ ಪಿತೂರಿಯ ಹಿಂದೆ ಮಾಜಿ ಶಾಸಕನ ಕೈವಾಡವಿದೆ. ಬಂಧಿತ ಶಾಸಕ ಡೆಪ್ಯೂಟಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು ಎಂದು ಮಣಿಪುರ ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಂಫಾಲ್‌ನ ನ್ಯೂ ಚೆಕ್ಕಾನ್ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೊಸ ಹಿಂಸಾಚಾರವು ನಡೆದಿದೆ. ಈ ಪ್ರದೇಶದಲ್ಲಿ ಕುಕಿಗಳು, ಮೀತೀಗಳು ಮತ್ತು ಇತರ ಜನಾಂಗೀಯ ಗುಂಪುಗಳು ನೆಲೆಸಿದ್ದಾರೆ.

ಸೋಮವಾರ ಬೆಳಗ್ಗೆ, ಕರ್ಫ್ಯೂ ಸಡಿಲಗೊಂಡಿದ್ದರಿಂದ, ಮಾಜಿ ಶಾಸಕರ ನೇತೃತ್ವದ ತಂಡ ಬಂದೂಕುಗಳೊಂದಿಗೆ ಶಸ್ತ್ರಸಜ್ಜಿತವಾಗಿ ಬಂದು ವ್ಯಾಪಾರಸ್ಥರಿಗೆ ತಮ್ಮ ಅಂಗಡಿಗಳನ್ನು ಮುಚ್ಚುವಂತೆ ಹೇಳಿದ್ದಾರೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿದರು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

”ಕೆಲವು ಕಡೆಗಳಲ್ಲಿ ಹಿಂಸಾಚಾರದ ಘಟನೆಗಳು ಕಡಿಮೆಯಾಗಿವೆ. ಇತ್ತೀಚೆಗೆ ಯಾವುದೇ ದೊಡ್ಡ ಮಟ್ಟದ ಹಿಂಸಾಚಾರ ಅಥವಾ ಜೀವಹಾನಿಯಾಗಿಲ್ಲ. ರಾಜ್ಯದಲ್ಲಿ ಈಗಾಗಲೇ ಸೇನೆ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಒಂದುವೇಳೆ ಅಹಿತಕರ ಘಟನೆಗಳು ನಡೆದರೆ, ಈ ಸ್ಥಳಗಳಿಗೆ ತಲುಪಿ, ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುತ್ತೇವೆ” ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ 10,000 ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸೈನಿಕರನ್ನು ನಿಯೋಜಿಸಲಾಗಿದೆ. ಭದ್ರತಾ ಪಡೆಗಳು ಮಾನವ ರಹಿತ ವೈಮಾನಿಕ ವಾಹನಗಳು ಮತ್ತು ಚೀತಾ ಹೆಲಿಕಾಪ್ಟರ್‌ಗಳ ಮೂಲಕ ಸ್ಥಳದಲ್ಲಿ ವೈಮಾನಿಕ ಕಣ್ಗಾವಲು ನಡೆಸುತ್ತಿವೆ. ರಾಜ್ಯದ ಒಳಗೆ ಮತ್ತು ಹೊರಗೆ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷವನ್ನು ಪ್ರಚೋದಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಎಫ್‌ಐಆರ್‌ಗಳನ್ನು ದಾಖಲಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ, ಮಣಿಪುರ ಗೃಹ ಇಲಾಖೆಯು, ಸಾಮಾಜಿಕ ಮಾಧ್ಯಮವನ್ನು ದ್ವೇಷ ಭಾಷಣಕ್ಕಾಗಿ ಬಳಸಬಹುದೆಂಬ ಆತಂಕವನ್ನು ಉಲ್ಲೇಖಿಸಿ, ಇಂಟರ್‌ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಮೇ 26 ರವರೆಗೆ ವಿಸ್ತರಿಸಿದೆ.

ಸೋಮವಾರ ನಡೆದ ಘಟನೆಯಿಂದ ಕರ್ಫ್ಯೂ ಸಡಿಲಿಕೆಯ ಸಮಯವನ್ನು ಬೆಳಗ್ಗೆ 6 ರಿಂದ ಮಧ್ಯಾಹ್ನ 2ಕ್ಕೆ ರಾಜ್ಯ ಸರ್ಕಾರವು ಇಳಿಸಿದೆ. ಮೊದಲು ವಿಶ್ರಾಂತಿ ಅವಧಿಯು ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ಸಡಿಲಿಸಲಾಗಿತ್ತು.

ಕಳೆದ 10 ದಿನಗಳಲ್ಲಿ ಮಣಿಪುರದಲ್ಲಿ ಪರಿಸ್ಥಿತಿ ಹೆಚ್ಚಾಗಿ ಶಾಂತಿಯುತವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದು, ಸಾರ್ವಜನಿಕರು ಶಾಂತವಾಗಿರಲು ಮತ್ತು ಸಹಜತೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!