ವ್ಯಕ್ತಿಯೊಬ್ಬ ತನ್ನ ಸಹ ಜೀವನ ಸಂಗಾತಿ ಮಹಿಳೆಯನ್ನು ಕೊಂದು, ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ ಕುಕ್ಕರಲ್ಲಿ ಬೇಯಿಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
56 ವರ್ಷದ ಆರೋಪಿ ಮನೋಜ್ ಸಹಾನಿ ಎಂಬಾತ 32 ವರ್ಷದ ಸರಸ್ವತಿ ವೈದ್ಯ ಮಹಿಳೆಯನ್ನು ಬರ್ಬರವಾಗಿ ಕೊಂದಿದ್ದಾನೆ. ಕಳೆದ ಮೂರು ವರ್ಷಗಳಿಂದ ಮೀರಾ ರೋಡ್ ಪ್ರದೇಶದ ಆಕಾಶಗಂಗಾ ಕಟ್ಟಡದ ಬಾಡಿಗೆ ಫ್ಲಾಟ್‌ನಲ್ಲಿ ಇವರಿಬ್ಬರು ವಾಸವಾಗಿದ್ದರು.
3–4 ದಿನಗಳ ಹಿಂದೆ ಸರಸ್ವತಿಯನ್ನು ಕೊಂದಿದ್ದ ಮನೋಜ್, ಮರ ಕತ್ತರಿಸುವ ಯಂತ್ರವನ್ನು ಖರೀದಿಸಿ ಆಕೆಯ ದೇಹವನ್ನು 12 ತುಂಡು ಮಾಡಿದ್ದ. ಬಳಿಕ, ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿ, ಹೊರಗೆ ಎಸೆಯುವುದಕ್ಕಾಗಿ ಪ್ಲಾಸ್ಟಿಕ್ ಪೇಪರ್‌ನಲ್ಲಿ ಸುತ್ತಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಫ್ಲಾಟ್‌ನಲ್ಲಿ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಸರಸ್ವತಿ ಅವರ ಕೊಳೆತ ಮೃತದೇಹ ಕಂಡುಬಂದಿದೆ.
“ಆರೋಪಿ ಮತ್ತು ಹತ್ಯೆಯಾದ ಮಹಿಳೆ ಸಹಜೀವನ ಸಂಬಂಧದಲ್ಲಿ ವಾಸಿಸುತ್ತಿದ್ದರು. ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನಿಖೆ ನಡೆಯುತ್ತಿದೆ” ಎಂದು ಮುಂಬೈನ ಉಪ ಪೊಲೀಸ್ ಆಯುಕ್ತ ಜಯಂತ್ ಬಜ್ಬಲೆ ತಿಳಿಸಿದ್ದಾರೆ.