posted by shukradeshenews july2

2023-24 ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10.08.23.

ಹಳ್ಳಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೆರವಾಗುವುದು ಜವಾಹರ ನವೋದಯ ವಿದ್ಯಾಲಯಗಳ ಮುಖ್ಯ ಗುರಿ. ಈ ನವೋದಯ ಶಾಲೆಗಳಲ್ಲಿ ಕಲಿಕೆ, ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡ ಲೇಖನ .


ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಉನ್ನತವಾದ ಕಲಿಕಾ ವಾತಾವರಣವನ್ನು ನಿರ್ಮಿಸಿ ಅವರ ಕಲಿಕಾ ಸಾಮರ್ಥ್ಯವನ್ನು ಉದ್ದೀಪನಗೊಳಿಸುವ ಉದ್ದೇಶದೊಂದಿಗೆ ಆರಂಭವಾಗಿದ್ದು ಜವಾಹರ ನವೋದಯ ವಿದ್ಯಾಲಯ ವಸತಿ ಶಾಲೆ. ‘ರಾಷ್ಟ್ರೀಯ ಶಿಕ್ಷಣ ನೀತಿ – 1986’ ಅಡಿಯಲ್ಲಿ ಈ ಶಾಲೆ ಆರಂಭಿಸಲಾಗಿದೆ.

ಹಳ್ಳಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೆರವು ನೀಡುವುದು ಜವಾಹರ ನವೋದಯ ವಿದ್ಯಾಲಯಗಳ ಮುಖ್ಯ ಗುರಿ.ಇಂಥ ಉದ್ದೇಶದೊಂದಿಗೆ ಗ್ರಾಮೀಣ ಭಾಗದಲ್ಲಿ ಚಿಕ್ಕದಾಗಿ ಹಾಗೂ ಪ್ರಯೋಗವಾಗಿ ಪ್ರಾರಂಭವಾದ ಈ ಶಾಲೆಗಳು ಈಗ ನಮ್ಮ ದೇಶದ ಹೆಮ್ಮೆಯ ವಿದ್ಯಾಸಂಸ್ಥೆಗಳಾಗಿ ಬೆಳೆದು ನಿಂತಿವೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ವರದಾನವಾಗಿವೆ. ಈ ವಸತಿ ಶಾಲೆಗಳು ಮಕ್ಕಳಲ್ಲಿ ಶಿಸ್ತು ಮೂಡಿಸುವಲ್ಲಿ ಮತ್ತು ಅವರ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಒತ್ತು ಕೊಡುವಲ್ಲಿ ಯಶಸ್ವಿಯಾಗಿವೆ.

ಸುಸಜ್ಜಿತ ಕಲಿಕಾ ಕೊಠಡಿಗಳು, ಗ್ರಂಥಾಲಯ, ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯಗಳು, ಕ್ರೀಡಾಂಗಣಗಳು ಸೇರಿದಂತೆ ಉತ್ತಮ ಕಲಿಕೆಗೆ ಅಗತ್ಯವಿರುವ ಎಲ್ಲ ಮೂಲಸೌಲಭ್ಯಗಳು ಇಲ್ಲಿವೆ. ಉತ್ತಮವಾದ ಸಮತೋಲಿತ ಆಹಾರವನ್ನು ಮಕ್ಕಳಿಗೆ ಕೊಡಲಾಗುತ್ತದೆ. ಎಲ್ಲ ಶಿಕ್ಷಕರೂ ವಸತಿ ಶಾಲೆಯ ಒಳಗೇ ವಾಸಿಸುವುದರಿಂದ ಮಕ್ಕಳು ಮತ್ತು ಶಿಕ್ಷಕರ ಸಂವಹನ ಸಮರ್ಪಕವಾಗಿ ರೀತಿಯಲ್ಲಿ ಆಗುತ್ತದೆ. ಇದರಿಂದ ಮಕ್ಕಳ ಕಲಿಕಾಸಕ್ತಿ ಹೆಚ್ಚುತ್ತದೆ. ಈ ಶಾಲೆಯ ವೇಳಾಪಟ್ಟಿಯು ಬೆಳಿಗ್ಗೆ 5 ಗಂಟೆಯಿಂದ ಪ್ರಾರಂಭವಾಗಿ ರಾತ್ರಿ 10 ಅಥವಾ 11ರ ತನಕ ಇರುತ್ತದೆ. ಈ ಅವಧಿಯಲ್ಲಿ ಆಟ-ಪಾಠ-ಊಟ-ಕಲಿಕೆ-ಸ್ವಾಧ್ಯಾಯ ಎಲ್ಲವೂ ಇರುತ್ತದೆ.

ನವೋದಯ’ದ ವೈಶಿಷ್ಟ್ಯಗಳು

ಈ ವಿದ್ಯಾಲಯಗಳು ದೇಶದ ವಿವಿಧ ಭಾಗಗಳ ಗ್ರಾಮೀಣ ಪ್ರದೇಶಗಳಲ್ಲಿವೆ. ಇವು ಸಿ.ಬಿ.ಎಸ್.ಇ(ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಪಠ್ಯಕ್ರಮ) ಶಾಲೆಗಳಾಗಿರುತ್ತವೆ.

6 ರಿಂದ 12ನೆಯ ತರಗತಿಯಲ್ಲಿ ಓದುತ್ತಿರುವ ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ, ಉಚಿತವಾಗಿ ಸಮವಸ್ತ್ರಗಳು, ಊಟ-ವಸತಿ, ಪಠ್ಯಪುಸ್ತಕಗಳು, ಕಲಿಕಾ ಸಾಮಗ್ರಿಗಳು ಇತ್ಯಾದಿಗಳನ್ನು ನೀಡುತ್ತವೆ.

‘ಪ್ರತಿಭಾ ಪರೀಕ್ಷೆ’ಯ ಮೂಲಕ ಪ್ರತಿಭಾನ್ವಿತ ಮಕ್ಕಳನ್ನು ಶಾಲಾ ಪ್ರವೇಶಕ್ಕೆ ಆಯ್ಕೆಮಾಡಲಾಗುತ್ತದೆ. ಪ್ರತಿ ವರ್ಷ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಈ ಪ್ರವೇಶ ಪರೀಕ್ಷೆಗಳನ್ನು ಸಿ.ಬಿ.ಎಸ್.ಇ ಮಂಡಳಿ ನಡೆಸುತ್ತದೆ.
ಮೊದಲೇ ಹೇಳಿದಂತೆ ಈ ಶಾಲೆಗಳಲ್ಲಿ ಶೇ 75ರಷ್ಟಾದರೂ ಸೀಟುಗಳು ಗ್ರಾಮೀಣ ಮಕ್ಕಳಿಗೆ ಮೀಸಲಾಗಿರುತ್ತವೆ. 1/3 ಭಾಗದಷ್ಟು ಸೀಟುಗಳು ಹೆಣ್ಣುಮಕ್ಕಳಿಗಾಗಿ ಇರುತ್ತವೆ. ಈ ಶಾಲೆಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಪ್ರಾಂತೀಯ ಭಾಷೆಗಳನ್ನು ಬೋಧಿಸಲಾಗುತ್ತದೆ. 7 ಮತ್ತು 8ನೆಯ ತರಗತಿಯವರಗೂ ಮಾತೃಭಾಷೆಯ ನಂತರ ಇಂಗ್ಲಿಷ್ ಅಥವಾ ಹಿಂದಿ ಮಾಧ್ಯಮದಲ್ಲಿ ಬೋಧಿಸಲಾಗುತ್ತದೆ.

ಆಯ್ಕೆ ಹೇಗೆ?

ನವೋದಯ ವಿದ್ಯಾಲಯಗಳಿಗೆ 6, 9 ಮತ್ತು 11ನೆಯ ತರಗತಿಯ ಅರ್ಹ ಮಕ್ಕಳು ಸೇರಬಹುದು. ಯಾವ ಜಿಲ್ಲೆಯಲ್ಲಿ ಜವಾಹರ ನವೋದಯ ವಿದ್ಯಾಲಯವಿದೆಯೋ ಆ ಜಿಲ್ಲೆಯ ಮಕ್ಕಳು ಮಾತ್ರ ಆಯಾಯಾ ಜಿಲ್ಲೆಯ ಶಾಲೆಗೆ ಸೇರಬಹುದು.

6ನೆಯ ತರಗತಿಗೆ ಸೇರಬಯಸುವ ಮಕ್ಕಳು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ, ಸರ್ಕಾರಿ ಅನುದಾನಿತ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ಶಾಲೆಯಲ್ಲಿ 5 ನೆಯ ತರಗತಿ ಓದಿರಬೇಕು. ಈ ಮಕ್ಕಳು ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ನಡೆಯುವ ಪ್ರತಿಭಾ ಪರೀಕ್ಷೆಗೆ ಹಾಜರಾಗಿ ಆಯ್ಕೆಯಾಗಬೇಕು.

ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುವಂತೆ, ಅರ್ಥವಾಗುವಂತೆ ಸರಳವಾಗಿ ಪರೀಕ್ಷೆ ನಡೆಸಲಾಗುತ್ತದೆ. ಎಲ್ಲ ಪ್ರಶ್ನೆಗಳೂ ಬಹು ಆಯ್ಕೆ ಪ್ರಶ್ನೆಗಳಾಗಿರುತ್ತವೆ.ಈ ಪರೀಕ್ಷೆಯ ಅವಧಿ 2 ಗಂಟೆಗಳು. ಪರೀಕ್ಷೆಯಲ್ಲಿ 3 ಭಾಗಗಳಿರುತ್ತವೆ.
ಬೌದ್ಧಿಕ ಸಾಮರ್ಥ್ಯ, ಅಂಕಗಣಿತ, ಭಾಷೆ ಕನ್ನಡವೂ ಸೇರಿದಂತೆ 20 ಭಾಷೆಗಳಲ್ಲಿ ಈ ಪ್ರಶ್ನಪತ್ರಿಕೆಗಳಿಗೆ ಉತ್ತರಿಸಬಹುದು.

6 ಮತ್ತು 9ನೆಯ ತರಗತಿಗೆ ನೇರವಾಗಿ ಸೇರಬಯಸುವ ಮಕ್ಕಳು ಸಾಮಾನ್ಯವಾಗಿ ಫೆಬ್ರುವರಿಯಲ್ಲಿ ನಡೆಯುವ ಪ್ರತಿಭಾ ಪರೀಕ್ಷೆಗೆ ಹಾಜರಾಗಿ ಆಯ್ಕೆಯಾಗಬೇಕು. ಈ ವರ್ಷ ಪ್ರತಿಭಾ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಕ್ಟೋಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ. ಈ ವಿಭಾಗದಲ್ಲಿ ಪರೀಕ್ಷೆ ಬರೆಯುವ ಮಕ್ಕಳು ಸರ್ಕಾರಿ, ಸರ್ಕಾರಿ ಅನುದಾನಿತ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ಶಾಲೆಯಲ್ಲಿ 8ನೆಯ ತರಗತಿಯನ್ನು ಓದಿರಬೇಕು.

ಈ ಪರೀಕ್ಷೆಯು ಇಂಗ್ಲಿಷ್ ಅಥವಾ ಹಿಂದಿ ಮಾಧ್ಯಮದಲ್ಲಿರುತ್ತದೆ. ಪರೀಕ್ಷೆಯ ಅವಧಿ ಎರಡೂವರೆ ಗಂಟೆಗಳು. ಮಕ್ಕಳು ಇಂಗ್ಲಿಷ್, ಹಿಂದಿ, ಗಣಿತ ಮತ್ತು ವಿಜ್ಞಾನ ವಿಷಯಗಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುತ್ತದೆ.

10ನೆಯ ತರಗತಿ ಅಂಕಗಳ ಆಧಾರದ ಮೇಲೆ 11ನೆಯ ತರಗತಿಯ ಉಳಿದ ಸೀಟುಗಳನ್ನು ತುಂಬಿಸಿಕೊಳ್ಳಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಈ ಜಾಲತಾಣವನ್ನು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ‌
https://navodaya.gov.in/nvs/en/Home1

Leave a Reply

Your email address will not be published. Required fields are marked *

You missed

error: Content is protected !!