5, 8ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅಸ್ತು
ಬೆಂಗಳೂರು: ರಾಜ್ಯ ಪಠ್ಯಕ್ರಮ ಹೊಂದಿದ ಐದು ಮತ್ತು ಎಂಟನೇ ತರಗತಿಯ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಈ ಕುರಿತಂತೆ ಮಧ್ಯಂತರ ಆದೇಶ ನೀಡಿದೆ.
ಆದೇಶದಲ್ಲಿ ಏನಿದೆ?
- ಸರ್ಕಾರ ಇದೇ 27ರಿಂದ ಪರೀಕ್ಷೆ ನಡೆಸಬೇಕು.
- ರಾಜ್ಯ ಪಠ್ಯಕ್ರಮವಿರುವ ಶಾಲೆಗಳ ಐದು ಮತ್ತು ಎಂಟನೇ ತರಗತಿಯ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಲಾಗುತ್ತಿದೆ.
- ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ರಮಕ್ಕೆ ಹೊರ ತಾದ ಪ್ರಶ್ನೆಗಳನ್ನು ಕೇಳುವಂತಿಲ್ಲ.
- ಸರ್ಕಾರ ಇದನ್ನು ಖಾತರಿಪಡಿಸಬೇಕು.
- ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಯನ್ನೂ ಅನುತ್ತೀರ್ಣಗೊಳಿಸುವಂತಿಲ್ಲ.
- ಫಲಿತಾಂಶವನ್ನು ಆಯಾ ಶಾಲೆಗಳಿಗಷ್ಟೇ ರವಾನಿಸಬೇಕು.
- ಶಾಲೆಗಳೂ ಫಲಿತಾಂಶವನ್ನು ಗೋಪ್ಯವಾಗಿ ಇರಿಸಬೇಕು. ಅದನ್ನು ಬಹಿರಂಗಗೊಳಿಸುವಂತಿಲ್ಲ.
- ಯಾವ ವಿದ್ಯಾರ್ಥಿಯೂ ಅದೇ ತರಗತಿಯಲ್ಲಿ ಉಳಿಯದಂತೆ ಸರ್ಕಾರ ಹಾಗೂ ಶಾಲೆ ಖಾತರಿಪಡಿಸಬೇಕು.
- ಪರೀಕ್ಷೆಯ ಸ್ವರೂಪ ಮತ್ತು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲಾಗದು ಎಂಬುದನ್ನು ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು.
- ಈ ಎಲ್ಲಾ ಪ್ರಕ್ರಿಯೆಗಳು ಮೇಲ್ಮನವಿಯ ಕುರಿತಂತೆ ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ವಿಭಾಗೀಯ ನ್ಯಾಯಪೀಠ ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
ಪ್ರಕರಣವೇನು?: ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದ ಸರ್ಕಾರದ ಆದೇಶ ಪ್ರಶ್ನಿಸಿ, “ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ” (ರುಪ್ಸಾ) ಹಾಗೂ ಇತರರು ಸಲ್ಲಿಸಿದ್ದ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇದೇ 10ರಂದು ಪುರಸ್ಕರಿಸಿತ್ತು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಮಧ್ಯೆಯೇ 5, 8ರ ಮೌಲ್ಯಾಂಕನ: ಕೋರ್ಟ್ ನಿರ್ದೇಶನದಂತೆ 5 ಹಾಗೂ 8ನೇ ತರಗತಿ ಪರೀಕ್ಷೆಗಳನ್ನು ನಡೆಸಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್ 29ರಿಂದ ಬೆಳಿಗ್ಗೆ ನಡೆದರೆ, ಮಧ್ಯಾಹ್ನದ ನಂತರ 5 ಹಾಗೂ 8ನೇ ತರಗತಿಗೆ ನಡೆಸಲು ಯೋಚಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತ ಆರ್. ವಿಶಾಲ್ ಹೇಳಿದರು.
5, 8ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅಸ್ತು