ಸುದ್ದಿರಾಜ್ಯದಲ್ಲಿ ಭಾನುವಾರದ ಮಳೆಗೆ ಮೂರು ಸಾವು May 21, 2023ರಾಜ್ಯದಲ್ಲಿ ಭಾನುವಾರದ ಮಳೆಗೆ ಮೂರು ಸಾವು
ಬೆಂಗಳೂರು : ರಾಜ್ಯದ ವಿವಿಧೆಡೆ ಭಾನುವಾರ ಸುರಿದ ಮಳೆಗೆ ಬೆಂಗಳೂರು, ಚಿಕ್ಕಮಗಳೂರು ಹಾಗೂ ಕೊಪ್ಪಳದಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ.
ಕೊಪ್ಪಳದಲ್ಲಿ ಸಿಡಿಲು ಬರಿದು ಯುವಕ, ಬೆಂಗಳೂರಿನ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಕಾರು ಮುಳುಗಿ ಯುವತಿ ಹಾಗೂ ಚಿಕ್ಕಮಗಳೂರಿನಲ್ಲಿ ಗಾಳಿ ಮಳೆಗೆ 5 ಮರಗಳು ಬಿದ್ದು ಮೂವರು ದುರಂತ ಸಾವನ್ನಪ್ಪಿದ್ದಾರೆ.
ಕೊಪ್ಪಳ ತಾಲೂಕಿನ ಶಿವಪುರದಲ್ಲಿ ಸಿಡಿಲು ಬಡಿದು ಬಾಲಕನೊಬ್ಬ ಸಾವನ್ನಪ್ಪಿದ್ದಾರೆ. ಮೃತ ಬಾಲಕನನ್ನು ಶ್ರೀಕಾಂತ ದೊಡ್ಡನಗೌಡ್ರ ಮೇಟಿ (16) ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಮಳೆ ಬರುತ್ತಿದ್ದಾಗ ರಸ್ತೆಯಲ್ಲಿದ್ದ ಮರದ ಬಳಿ ಯುವಕ ನಿಂತುಕೊಂಡಿದ್ದನು. ಆಗ ಏಕಾಏಕಿ ಸಿಡಿಲು ಬಡಿದು ತೀವ್ರವಾಗಿ ಗಾಯಗೊಂಡು ಬಿದ್ದಿದ್ದನು. ಗಾಯಗೊಂಡ ಶ್ರೀಕಾಂತನನ್ನು ಜಿಲ್ಲಾಸ್ಪತ್ರೆಗೆ ರವಾನಿಸುವಾಗ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯು ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಳೆಯ ನಡುವೆಯೇ ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವಯಕ್ತಿಯ ಮೇಲೆ ಬೃಹತ್ ಮರ ಬಿದ್ದಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ವೇಣುಗೋಪಾಲ್ (45) ಎಂದು ಗುರುತಿಸಲಾಗಿದೆ. ಚಿಕ್ಕಹಳ್ಳ ಗ್ರಾಮದಲ್ಲಿ ಹೋಮ್ ಸ್ಟೇ ನಡೆಸುತ್ತಿದ್ದ ವೇಣುಗೋಪಾಲ್, ಅಲ್ಲಿಂದ ಬರುವಾಗ ಮರ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಪ್ರವಾಸಕ್ಕೆ ಬಂದಿದ್ದ 6 ಮಂದಿ ಕುಟುಂಬ ಸದಸ್ಯರು ಕಾರಿನಲ್ಲಿ ಹೋಗುವಾಗ ಕೆ.ಆರ್. ವೃತ್ತದ ಬಳಿ ಅಂಡರ್‌ಪಾಸ್‌ನಲ್ಲಿ ನೀರು ಸಂಗ್ರಹವಾಗಿದೆ. ಇನ್ನು ಕಾರು ಅಂಡರ್‌ಪಾಸ್ ದಾಟುವಾಗ ಆಫ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಹೆಚ್ಚಿನ ನೀರು ಸಂಗ್ರಹಗೊಂಡು ಕಾರು ಮುಳುಗಿದೆ. ಕಾರಿನ ಬಾಗಿಲು ತೆಗೆಯಲು ಸಾಧ್ಯವಾಗದೇ ಎಲ್ಲರೂ ಕಿರುಚಾಡಿದ್ದಾರೆ. ಆಗ, ಕಾರಿನೊಳಗೆ ನೀರು ಕೂಡ ನುಗ್ಗಿದ್ದು, ಯುವತಿ ಭಾನುರೇಖಾ (22) ಎಂಬ ಯುವತಿ ನೀರು ಸೇವಿಸಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಾ ಗಂಭೀರ ಸ್ಥಿತಿ ತಲುಪಿದ್ದಳು. ಸ್ಥಳೀಯರ ಸಹಾಯದಿಂದ ಅವರನ್ನು ರಕ್ಷಣೆ ಮಾಡಲಾಗಿದ್ದು, ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಆಸ್ಪತ್ರೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ತೋರಿದ್ದರಿಂದ ಯುವತಿ ಮೃತಪಟ್ಟಿದ್ದಾಳೆ.