ಜಗಳೂರು,ಮಾ.12:ಸಮರ್ಪಕ ವಿದ್ಯುತ್ ಪೂರೈಕೆ ಮತ್ತು ಶೀಘ್ರ ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ)ಬಣದಿಂದ ಪ್ರತಿಭಟನೆ ನಡೆಸಲಾಯಿತು.

ಗುರುವಾರ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ನೂರಾರು ಪ್ರತಿಭಟನಾ ಕಾರರು ಮಹಾತ್ಮಗಾಂಧಿ ವೃತ್ತದ ಮೂಲಕ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ,ಅಂಬೇಡ್ಕರ್ ವೃತ್ತದ ಮೂಲಕ ಬೆಸ್ಕಾಂ ಇಲಾಖೆ ಮುಂಬಾಗ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾನನಕಟ್ಟೆ ತಿಪ್ಪೇಸ್ವಾಮಿ ಮಾತನಾಡಿ,ನದಿ ಮೂಲಗಳಿಲ್ಲದ ಬರಪೀಡಿತ ತಾಲ್ಲೂಕಿನಲ್ಲಿ ಬೇಸಿಗೆ ಸಮಯದಲ್ಲಿ ನೀರಾವರಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೆ ರೈತರ ಜಮೀನುಗಳಲ್ಲಿ ಬೆಳೆಗಳು ಬಾಡುತ್ತಿವೆ.ಹಗಲು ಮತ್ತು ರಾತ್ರಿ ವೇಳೆ ಕೇವಲ 2/2 ಗಂಟೆಗಳ ಕಾಲ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.ರಾತ್ರಿ ಸಮಯದಲ್ಲಿ ಕಾಡು ಪ್ರಾಣಿ ಗಳಾದ ಕರಡಿಗಳ ಹಾವಳಿ ಭಯದಿಂದ ರೈತರು ಬೆಳೆಗಳಿಗೆ ಸರಿಯಾಗಿ ನೀರಾಯಿಸಲು ಸಾಧ್ಯವಾಗುತ್ತಿಲ್ಲ.ತಾಲ್ಲೂಕಿನ ಅಣಬೂರು,ದೇವಿಕೆರೆ,ಮಾಗಡಿ,ಕಲ್ಲದೇವರಪುರ,ಗೌರಿಪುರ ಗ್ರಾಮಗಳಲ್ಲಿ ವಿದ್ಯುತ್ ಪ್ರಸರಣ ಉಪಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಆದೇಶಿಸಿದ್ದರೂ ಇದುವರೆಗೂ ಸ್ಥಾಪಿಸದೆ ವಿಳಂಬವಾಗಿದೆ‌.ಕೂಡಲೇ ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪಿಸಬೇಕು.ರೈತರ ಜಮೀನುಗಳಿಗೆ ದಿನಕ್ಕೆ 7 ತಾಸು ವಿದ್ಯುತ್ ಪೂರೈಕೆಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆ ತಾಲ್ಲೂಕು ಅಧ್ಯಕ್ಷ ಚಿರಂಜೀವಿ ಸಿ‌‌ ಎಂ ಹೊಳೆ ಮಾತನಾಡಿ,ತಾಲ್ಲೂಕಿನಲ್ಲಿ ಅಧಿಕಾರಿಗಳ ತಾಲ್ಲೂಕು ಆಡಳಿತ ವ್ಯವಸ್ಥೆಯ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾರೆ.ವಿದ್ಯುತ್ ಸಮಸ್ಯೆ ನಿರಂತರವಾಗಿದ್ದರೂ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ.ರೈತರ ಜಮೀನುಗಳಲ್ಲಿ ಬೆಳೆಗಳಿಗೆ ಗುಣಮಟ್ಟದ ವಿದ್ಯುತ್ ಸಿಗುತ್ತಿಲ್ಲ. ದಿನದಲ್ಲಿ 5 ತಾಸು ವಿದ್ಯುತ್ ಪೂರೈಕೆ ಮಾಡುವ ಭರವಸೆಯೂ ಹುಸಿಯಾಗಿದೆ.ಹಗಲು ರಾತ್ರಿ ಜಮೀನುಗಳಲ್ಲಿ ಬೆಳೆಗಳಿಗೆ ರೈತರು ನೀರಾಯಿಸಲು ಹರಸಾಹಸಪಡಬೇಕಿದೆ.ಕೂಡಲೇ ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ ಜಗಳೂರು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.

ದಾವಣಗೆರೆ ಕೆಪಿಟಿಸಿಎಲ್ ಪ್ರಸರಣ ವೃತ್ತದ ಅಧೀಕ್ಷಕ ಇಂಜಿನಿಯರ್ ರೇವಣಸಿದ್ದಪ್ಪ ಪ್ರತಿಕ್ರಿಯಿಸಿ,
ತಾಲ್ಲೂಕಿನ ಗೌರಿಪುರ ಗ್ರಾಮದಲ್ಲಿ 220‌ಕೆವಿ ವಿದ್ಯುತ್ ಪ್ರಸರಣಾ ಉಪಕೇಂದ್ರ ಸ್ಥಾಪಿಸಲು ತಂತಿಬೇಲಿ ಹಾಕಿ ಜಾಗ ನಿಗದಿಯಾಗಿದೆ.ಸಮೀಕ್ಷೆ ಕಾರ್ಯ ಮುಗಿದಿದ್ದು ಡಿಪಿಆರ್ ನ್ನು ಸರ್ಕಾರಕ್ಕೆ ಕಳುಹಿಸಲಾಗುವುದು.ಅಣಬೂರು ಬಳಿ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪಿಸಲು ಕೆರೆ ನೀರು ಅಡ್ಡಿಯಾಗಿದ್ದು ಶೀಘ್ರ ಪರಿಹರಿಸಲಾಗುವುದು.ಪಲ್ಲಾಗಟ್ಟೆಯಲ್ಲಿ 12.5 ಎಂ.ವಿ ವಿದ್ಯುತ್ ಉತ್ಪಾದನೆ ಯಾಗುತ್ತಿದೆ.ಸೊಕ್ಕೆ ಬಳಿ ಕುಸುಮ -ಸಿ ಯೋಜನೆಯಡಿ ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಲಾಗುವುದು ಹಂತಹಂತವಾಗಿ ವಿದ್ಯುತ್ ಪೂರೈಕೆಮಾಡಲು ಕ್ರಮವಹಿಸಲಾಗುವುದು ರೈತರು ಸಹಕರಿಸಬೇಕು ಎಂದು ಮನವಿಮಾಡಿದರು.

ಈ ಸಂದರ್ಭದಲ್ಲಿ ಬೆಸ್ಕಾಂ ಎಇಇ ಮಲ್ಲಿಕಾರ್ಜುನ್, ಸಂಘಟನೆಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು,ಪದಾಧಿಕಾರಿಗಳಾದ ಕಸವನಹಳ್ಳಿ ನಾಗರಾಜ್,ಗೌಡಗೊಂಡನಹಳ್ಳಿ ಸತೀಶ್,ಸಹದೇವರೆಡ್ಡಿ,ಶರಣಪ್ಪ,ವೀರೇಶ್,ತಿಪ್ಪೇಸ್ವಾಮಿ,ಪರುಸಪ್ಪ,ಪಾಪಣ್ಣ,ಗುರುಸಿದ್ದಪ್ಪ,ಬಸಣ್ಣ,ರಂಗಜ್ಜ,ಹನುಮಂತಪ್ಪ,ಮಲ್ಲೇಶಿ,ಹೊನ್ನೂರ್ ಅಲಿ,ಚನ್ನಪ್ಪ,ಜಯ್ಯಣ್ಣ,ಓಬಣ್ಣ,ಮಾರುತಿ,ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!