ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪೀಕರ್‌ ಸ್ಥಾನದಲ್ಲಿ ಕೂತ ಮುಸ್ಲಿಂ ಸಮುದಾಯದ ಯುಟಿ ಖಾದರ್: Wednesday, May 24,
ಬೆಂಗಳೂರು, ಮೇ 24: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ಸಮುದಾಯದಿಂದ ವಿಧಾನಸಭೆ ಸ್ಪೀಕರ್‌ ಆಗಿ ಯುಟಿ ಖಾದರ್‌ ಅಧಿಕಾರ ಸ್ವೀಕರಿಸಿದ್ದಾರೆ. ಹಿಂದೆ ಖಾದರ್‌ ಅವರು ಕ್ಯಾಬಿನೆಟ್‌ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.

ಈ ಬಾರಿಯ ವಿಧಾನಸಭೆ ಕಾಂಗ್ರೆಸ್‌ಗೆ ಅಚ್ಚರಿಯ ಫಲಿತಾಂಶವನ್ನು ನೀಡಿದಲ್ಲದೆ ಕಾಂಗ್ರೆಸ್‌ಗೆ ಭರ್ಜರಿ 135 ಸ್ಥಾನಗಳ ಜಯವನ್ನು ನೀಡಿತು, ಹಿಂದೆ ಕಾಂಗ್ರೆಸ್‌ ಸಚಿವರಾಗಿ ಅನೇಕ ಖಾತೆಗಳನ್ನು ನಿರ್ವಹಿಸಿರುವ ಯುಟಿ ಖಾದರ್ ಮೊದಲ ಬಾರಿ ಸ್ಪೀಕರ್‌ ಆಗಿ ಅಧಿಕಾರರೂಢರಾಗಿದ್ದಾರೆ. BA.LLB ವ್ಯಾಸಂಗ ಮಾಡಿರುವ ಯು.ಟಿ. ಅಬ್ದುಲ್ ಖಾದರ್ ಫರೀದ್ ಕರುನಾಡ ಮೊದಲ ಮುಸ್ಲಿಂ ಸ್ಪೀಕರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಯುಟಿ ಖಾದರ್ ಅವರ ಪೂರ್ಣ ಹೆಸರು ಯು.ಟಿ.ಅಬ್ದುಲ್ ಖಾದರ್ ಫರೀದ್. 12-10-1969ರಂದು ಯು.ಟಿ.ಫರೀದ್ & ಯು.ಟಿ.ನಸೀಮಾ ದಂಪತಿ ಪುತ್ರನಾಗಿ ಯು.ಟಿ.ಖಾದರ್ ಕರಾವಳಿ ಮಂಗಳೂರಿನಲ್ಲಿ ಜನಿಸಿದರು.

BA.LLB ವ್ಯಾಸಂಗ ಮಾಡಿರುವ ಯು.ಟಿ.ಖಾದರ್ ಅವರ ತಂದೆ ಕೂಡ ಶಾಸಕರಾಗಿದ್ದರು. ಯು.ಟಿ.ಫರೀದ್ 1972,1978,1999, 2004ರಲ್ಲಿ 4 ಬಾರಿ ಶಾಸಕ ಸ್ಥಾನ ಅಲಂಕರಿಸಿದ್ದರು. ಇನ್ನು ಯು.ಟಿ.ಖಾದರ್ ಅವರ ತಾಯಿ ಹೆಸರು ಯು.ಟಿ.ನಸೀಮಾ ಫರೀದ್.
: ರಾಜ್ಯದ ಮೊದಲ ಮುಸ್ಲಿಂ ಸ್ಪೀಕರ್ ಖಾದರ್

ಇನ್ನು ಸೈಂಟ್ ಜೆರೋಝ್ ಶಾಲೆಯಲ್ಲಿ ಯುಟಿ ಖಾದರ್ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ 4ನೇ ತರಗತಿಗೆ ಸೈಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಗೆ ಸೇರಿ, ಪ್ರೌಢ ಶಿಕ್ಷಣವನ್ನ ಅಲ್ಲೇ ಪಡೆದಿದ್ದಾರೆ. ಪದವಿ ಪೂರ್ವ ಶಿಕ್ಷಣ ಮೂಡಬಿದಿರೆ ಮಹಾವೀರ ಕಾಲೇಜಿನಲ್ಲಿ ಮುಗಿಸಿದ್ದು, SDM ಕಾಲೇಜಿನಲ್ಲಿ BA.LLB ಪದವಿ ಶಿಕ್ಷಣ ಪಡೆದಿದ್ದಾರೆ.

ವಿಧಾನಸಭೆ ನೂತನ ಸ್ವೀಕರ್ ಆಗಿ ಯುಟಿ ಖಾದರ್ ಅವರು ಸರ್ವಾನುಮತದಿಂದ ಬುಧವಾರ ಆಯ್ಕೆಯಾಗಿದ್ದಾರೆ. ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಮಂಗಳೂರು ಶಾಸಕ ಯು.ಟಿ. ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದರು. ನಿನ್ನೆಯಷ್ಟೇ ಅವರು ಸ್ಪೀಕರ್‌ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ್ದರು.

ಮುಖ್ಯಮಂತ್ರಿ ಆದೇಶ ಪ್ರಸ್ತಾವವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನುಮೋದಿಸಿದರು. ಇದರಂತೆ ವಿಧಾನಸಭೆ ಸ್ಪೀಕರ್ ಆಗಿ ಯು.ಟಿ. ಖಾದರ್ ಅವರು ಸರ್ವಾನುಮತದಿಂದ ಆಯ್ಕೆಗೊಂಡರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಸಭಾಧ್ಯಕ್ಷರಾದ ಎರಡನೇ ಜನಪ್ರತಿನಿಧಿ ಖಾದರ್‌ ಆಗಿದ್ದಾರೆ.

ಇದರಂತೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಿಂದ ಈ ಹುದ್ದೆಗೆ ಏರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಹಿಂದೆ ಬೆಳ್ತಂಗಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿ. ವೈಕುಂಠ ಬಾಳಿಗಾ ಎರಡು ಬಾರಿ (1962, 1967) ಸಭಾಧ್ಯಕ್ಷರಾಗಿದ್ದರು.

ಖಾದರ್‌ ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿ ಆರೋಗ್ಯ ಖಾತೆ, ಜಲಸಂಪನ್ಮೂಲ ಖಾತೆ, ನಗರಾಭಿವೃದ್ಧಿ ಮತ್ತು ವಸತಿಯಂತಹ ದೊಡ್ಡ ಖಾತೆಗಳ ಮಂತ್ರಿಯಾಗಿಯೂ ಉತ್ತಮ ಹೆಸರು ಮಾಡಿದ್ದವರು.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಯುಟಿ ಖಾದರ್ ಆಯ್ಕೆ

Leave a Reply

Your email address will not be published. Required fields are marked *

You missed

error: Content is protected !!