ಸ್ಪೀಕರ್ ಆಗಲಿದ್ದಾರೆ ಯುಟಿ ಖಾದರ್
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಸ್ಪೀಕರ್ ಆಗಿ ಆಯ್ಕೆ ಆಗಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಖಾದರ್ ಅವರಿಗೆ ಮಧ್ಯರಾತ್ರಿ ಕರೆ ಮಾಡಿ ಸ್ಪೀಕರ್ ಹುದ್ದೆಯನ್ನು ಅಲಂಕರಿಸಬೇಕೆಂದು ಸೂಚನೆ ನೀಡಿದ್ದಾರೆ.
ಹೈಕಮಾಂಡ್ ಆದೇಶದ ಹಿನ್ನೆಲೆಯಲ್ಲಿ ಖಾದರ್ ಈ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದು ಇಂದು ಬೆಳಗ್ಗೆ ಸ್ಪೀಕರ್ ಸ್ಥಾನಕ್ಕೆ ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆ. ಮಂಗಳೂರು ವಿಧಾನಸಭಾ ಕ್ಷೇತ್ರದದಿಂದ ನಿರಂತರವಾಗಿ ಆಯ್ಕೆ ಆಗುತ್ತಿರುವ ಖಾದರ್ 2007 ರಿಂದ 2012ರವರೆಗೆ ಖಾದರ್ ವಿಪಕ್ಷ ಶಾಸಕರಾಗಿದ್ದರು.
2013ರಲ್ಲಿ ಸಿದ್ಧರಾಮಯ್ಯ ಸರ್ಕಾರ ಬಂದಾಗ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. 2016ರವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ, 2016-18ರವರೆಗೆ ಅವರು ಆಹಾರ, ನಾಗರಿಕ ಪೂರೈಕೆ ಖಾತೆ ನಿಭಾಯಿಸಿದರು.