Kannada | online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online August 4
ನಮ್ಮನ್ನು ನಾವು ತಿದ್ದಿಕೊಳ್ಳಲು ವಚನಗಳು ಸಹಕಾರಿ :
ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯ ಕೇವಲ ಒಂದು ಪ್ರಾಂತ್ಯ ,ಪ್ರದೇಶ ,ಭಾಷೆಗೆ ಸೀಮಿತವಾಗದೆ ಜಗತ್ತಿನ ಜನರ ಬದುಕನ್ನು ಹಸನಾಗಿಸಲು ಬೇಕಾದ ಎಲ್ಲಾ ಅಗಣಿತ ಅಂಶಗಳನ್ನು ಒಳಗೊಂಡು ಕಾಲಾತೀತವಾಗಿ ಬೆಳೆದಿದೆ ಎಂದು ನಾಲಂದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸಿ .
ತಿಪ್ಪೇಸ್ವಾಮಿ ಅವರು ನುಡಿದರು. ಅವರು ಬುಧವಾರ ಜಗಳೂರಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮತ್ತು ನಾಲಂದ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಫ ಗು ಹಳಕಟ್ಟಿ, ಎಂ .ಎಂ. ಕಲ್ಬುರ್ಗಿ, ಸುತ್ತೂರು ಜಗದ್ಗುರುಗಳು ,ಸಿರಿಗೆರೆ ಜಗದ್ಗುರುಗಳು ಮುಂತಾದವರು ಕಾಪಿಟ್ಟುಕೊಟ್ಟಿರುವ ವಚನಗಳು ಒಂದು ಅಮೂಲ್ಯ ನಿಧಿ. ಅರಿತರೆ ಶರಣ ಮರೆತರೆ ಮಾನವ ಎನ್ನುವಂತೆ ವಚನಗಳ ಸಾರವನ್ನು ನಾವು ಅರಿತು ನಡೆಯಬೇಕಿದೆ ,ವಚನಗಳ ಓದಿನ ಹಿನ್ನೆಲೆಯಲ್ಲಿ ನಮಗೆ ನಾವು ನೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ. ನಮ್ಮನ್ನು ನಾವು ತಿದ್ದಿಕೊಳ್ಳಲು ವಚನಗಳು ಸಹಕಾರಿ ಎಂಬ ಸತ್ಯವನ್ನು ಅರಿಯಬೇಕಿದೆ ಎಂದು ಅವರು ನುಡಿದರು .
ಬಸವ ಭಾರತಿ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಡಾ . ಪ್ರಭಾಕರ್ ಲಕ್ಕೋಳ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶರಣರ ಬದುಕಿನ ಅನುಭವದ ಗಟ್ಟಿ ಸಾರವೇ ವಚನಗಳು. ಅವು ನಮ್ಮ ಅನುಭವಗಳು ಕೂಡ ಆಗಿ ನಮ್ಮ ಬದುಕನ್ನು ಆವರಿಸಿಕೊಂಡಿವೆ. ಹಾಗಾಗಿಯೇ 12ನೆಯ ಶತಮಾನ ದಿಂದ ಇಲ್ಲಿಯವರೆಗೆ ವಚನ ಸಾಹಿತ್ಯ ಗಟ್ಟಿಯಾಗಿ ನೆಲೆ ನಿಂತಿದೆ ಎಂದು ಬಣ್ಣಿಸಿದರು .ದತ್ತಿದಾನಿಗಳಾದ ಶ್ರೀಮತಿ ಅಕ್ಕಮಹಾದೇವಿ, ಶ್ರೀ ಟಿ ಆರ್ ಮಹೇಶ್ವರಪ್ಪ ,ಶ್ರೀಮತಿ ನಿವೇದಿತಾ ಜಿಟಿ ಪರಮೇಶ್ವರಪ್ಪ ಇವರ ಹಿರಿಯರ ಹೆಸರಿನಲ್ಲಿ ವಚನ ಸಾಹಿತ್ಯದ ಪ್ರಸ್ತುತತೆ ಕುರಿತಾಗಿ ಈ ಸಂದರ್ಭದಲ್ಲಿ ದತ್ತಿ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು
ನಿವೃತ್ತ ಉಪನ್ಯಾಸಕರಾದ ಶ್ರೀ ಎಚ್.ಎಸ್ .ವಸಂತ ರವರು ಮಡಕೆ ದೈವ,ಮರ ದೈವ ಎಂದು ಕಂಡ ಕಂಡ ದೇವರುಗಳಿಗೆ ಕೈಯ ಮುಗಿಯುವುದಕ್ಕಿಂತ ಏಕದೇವೋಪಾಸನೆಗೆ ಇಂಬು ನೀಡಿದವರು ಶರಣರು. ಭಯವೇ ಧರ್ಮದ ಮೂಲವಯ್ಯ ಎನ್ನುವುದಕ್ಕಿಂತ ದಯವೇ ಧರ್ಮದ ಮೂಲವಯ್ಯ ಎಂಬುದನ್ನು 12ನೆಯ ಶತಮಾನದಲ್ಲಿ ಸಾರಿ ಹೇಳಿದವರು. ಅವರ ವೈಚಾರಿಕ ನಡೆ-ನುಡಿಗಳಿಂದ ವಚನಗಳು ಕನ್ನಡದ ಉಪನಿಷತ್ತು ಎಂದು ತೋರಿಸಿದವರು. ಹಾಗಾಗಿ ವಚನ ಸಾಹಿತ್ಯ ಸಾವಿರ ವರ್ಷಗಳ ನಂತರವೂ ವಿಶ್ವ ಸಾಹಿತ್ಯಕ್ಕೆ ಕನ್ನಡದ ಶ್ರೇಷ್ಠ ಕೊಡುಗೆಯಾಗಿ ನಿಲ್ಲಬಲ್ಲದು ಎಂಬುದನ್ನು ಮನವರಿಕೆ ಮಾಡಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್. ಟಿ. ಎರ್ರಿ ಸ್ವಾಮಿ ಅವರು ಪ್ರಸ್ತಾವಿಕ ನುಡಿಗಳನ್ನಾಡಿ ನ ದತ್ತಿ ಉಪನ್ಯಾಸಗಳ ಮಹತ್ವವನ್ನು ತಿಳಿಸಿದರು.ದತ್ತಿ ದಾನಿಗಳಾದ ಟಿ. ಆರ್. ಮಹದೇವಪ್ಪನವರು ಮಾತನಾಡಿದರು. ಕಾರ್ಯಕ್ರಮದಲ್ಲಿ ದಿವ್ಯ ಭಾರತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಾಲರಾಜು, ಕದಳಿ ಮಹಿಳಾ ವೇದಿಕೆಯ ಲೀಲಾವತಿ, ರೇವತಿ , ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಈ ಸತೀಶ್ , ರಖೀಬ್, ಚಂದ್ರಕಾಂತ್, ಡಿ. ಸಿ. ಮಲ್ಲಿಕಾರ್ಜುನ , ಎನ್.ಎಂ. ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಸತೀಶ್ ರವರು ಸ್ವಾಗತಿಸಿ ಶ್ರೀ ಚಂದ್ರಪ್ಪನವರು ನಿರೂಪಣೆ ಮಾಡಿದರು. ನಾಲಂದ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದರು.