ಜಗಳೂರು ಸುದ್ದಿ :-ಅಂದಿನ ಮೈಸೂರು ಸಂಸ್ಥಾನದ ಮಂತ್ರಿ ಮಂಡಲದಲ್ಲಿ ವಿದ್ಯಾ ಮಂತ್ರಿ ಸೇರಿದಂತೆ ಒಂಭತ್ತು ಖಾತೆಗಳನ್ನು ನಿರ್ವಹಿಸಿದ ಜಗಳೂರಿನ ಜೆ.ಎಂ.ಇಮಾಂ ಸಾಹೇಬರು ವಿರೋಧ ಪಕ್ಷದ ನಾಯಕರಾಗಿ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಈ ದೇಶದ ಭವಿದ್ಯ ಬರೆಯುವ ಮಾರ್ಗದರ್ಶಿಗಳಾಗಿ ಎಂದು ಅಕ್ಷರ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಹರೇಕಳ ಹಾಜಬ್ಬ ಹೇಳಿದರು.
ಪಟ್ಟಣದ ಜೆ.ಎಂ.ಇಮಾಂ ಮೆಮೋರಿಯಲ್ ಶಾಲೆಯಲ್ಲಿ ಶನಿವಾರ ಜೆ.ಎಂ.ಇಮಾಂ ಸ್ಮಾರಕ 6ನೇ ವರ್ಷದ ರಾಜ್ಯ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಮತ್ತು 50 ಸಾವಿರ ನಗದು ಸ್ವೀಕರಿಸಿ ಮಾತನಾಡಿದ ಅವರು, 71 ವರ್ಷದ ನನ್ನನ್ನು ಗುರುತಿಸಿ ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಕೊಡುವ ಪ್ರಶಸ್ತಿಯನ್ನು ನನಗೆ ಈ ಬಾರಿ ನೀಡುತ್ತಿರುವುದು ಸಂತೋಷದ ವಿಷಯ. ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ವಿದ್ಯೆ ಎಂಬುದು ಬಹಳ ಮುಖ್ಯ. ನಾನು ಅದರಿಂದ ವಂಚಿತನಾಗಿದ್ದ ಕಾರಣ ನನ್ನಂತೆ ಸಮಾಜದ ಮಕ್ಕಳು ಆಗಬಾರದು ಎಂದು ಕಿತ್ತಳೆ ಹಣ್ಣು ಮಾರಾಟ ಮಾಡಿ ಬಂದ ಲಾಭದಿಂದ 2004 ರಲ್ಲಿ ಶಾಲೆ ಆರಂಭಿಸಿದೆ. ಇಂದು ಸಾಕಷ್ಟು ಮಕ್ಕಳು ಓದುತ್ತಿದ್ದಾರೆ ಎಂದು ನೆನಪು ಮಾಡಿಕೊಂಡರು.
ನನ್ನ ಸಾಧನೆ ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಪದ್ಮಶ್ರೀ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ವಿದ್ಯಾರ್ಥಿಗಳು ನಿಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಮೊದಲು ಚನ್ನಾಗಿ ಓದಬೇಕು. ಪಿಯುಸಿ ಕಾಲೇಜು ಕಟ್ಟಬೇಕೆಂದಬುದು ನನ್ನ ಕೊನೆಯ ಆಸೆಯಾಗಿದೆ ಎಂದು ಹೇಳಿದರು.
ಸಾಂಸ್ಕøತಿಕ ಚಿಂತಕ, ಜನಪರ ಹೋರಾಟಗಾರ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಇಂದು ರಾಜಕಾರಣ ಅಷ್ಟೇ ಕೆಟ್ಟಿಲ್ಲ ಪ್ರಶಸ್ತಿಗಳೂ ಕೆಟ್ಟಿವೆ. ಪ್ರಶಸ್ತಿಗಾಗಿ ಲಾಬಿ ಮಾಡುವ ಮಂದಿ ಅದೆಷ್ಟೋ ಇದ್ದಾರೆ. ಅಂತಹವರ ನಡುವೆ ಹರೇಕಳ ಹಾಜಬ್ಬ ಅವರಿಗೆ ಭಾರತದ ಶ್ರೇಷ್ಠ ರಾಜಕಾರಣಿ, ರಾಜ್ಯ ಕಂಡ ಶ್ರೇಷ್ಠ ಮಾನವತಾವಾದಿ ಜೆ.ಇಮಾಂ ಸಾಹೇಬರ ಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿಗೆ ಅಕ್ಷರ ಸಂತನನ್ನು ಆಯ್ಕೆ ಮಾಡಿರುವುದು ಪ್ರಶಸ್ತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಸಂವಿಧಾನ ಪಾವಿತ್ರ್ಯವನ್ನು ಕಾಪಾಡಬೇಕಾದ ರಾಜಕೀಯ ವ್ಯವಸ್ಥೆ ಇಂದು ಸಮಾಜವನ್ನು ಕಲುಷಿತಗೊಳಿಸುತ್ತಿದೆ. ಇಮಾಂ ಸಾಹೇಬರು ನಾಡು ಕಂಡ ಮೇರು ರಾಜಕಾರಣಿ. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಅವರ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿ ಇಂದಿಗೂ ಜನರ ಹೃದಯದಲ್ಲಿ ಉಳಿದಿದ್ದಾರೆ. ಇಮಾಂ ಸಾಹೇಬರು ಬರೆದ ‘ಮೈಸೂರು ಆಗ ಮತ್ತು ಈಗ’ ಕೃತಿ ಅವರ ರಾಜಕೀಯ ಸೇವಾ ತತ್ಪರತೆಯನ್ನು ಅನಾವರಣಗೊಳಿಸುತ್ತದೆ. ಇಮ್ಮಣ್ಣನವರ ರಾಜಕೀಯ ವೃತ್ತಿ ಜೀವನ ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಬೇಕು. ಭಗವಂತನ ಪೂಜೆ ಎಂದರೆ ಸಮಾಜ ಸೇವೆ. ಆಗ ಇಮಾಂ ಸಾಹೇಬರು ಮಾಡಿದ್ದು ಭಗವಂತನ ಸೇವೆಯಾದರೆ, ಇಂದು ಹರೇಕಳ ಹಾಜಬ್ಬ ಮಾಡುತ್ತಿರುವುದು ಭಗವಂತನ ಸೇವೆಯಾಗಿದೆ.
ಡಾ. ದಾದಾಪೀರ್ ನವಿಲೇಹಾಳ್ ಪ್ರಾಸ್ತಾವಿಕ ಮಾತನಾಡಿ, ಈ ನೆಲದ ಸಿದ್ದಾಂತಗಳು ನಾಶವಾಗಿ ರಾಜಕೀಯ ಕ್ಷೇತ್ರವೂ ಉದ್ಯಮವಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣ ಎಂದರೆ ಏನು ಅದರ ಮಹತ್ವ ಏನು ಎಂದು ಅಂದು ಇಮಾಂ ಸಾಹೇಬರು ತೋರಿಸಿಕೊಟ್ಟರು. ಇಂದು ಹಾಜಬ್ಬ ತೋರಿಸಿಕೊಟ್ಟಿದ್ದಾರೆ. ಇಂದು ರಾಜಕಾರಣವನ್ನು ಧರ್ಮ ಮತ್ತು ಜಾತಿಗಳು ಆಳ್ವಿಕೆ ಮಾಡುತ್ತಿವೆ. ಆದರೆ ಇದನ್ನೆಲ್ಲಾ ಹೊರತಾಗಿ ಸಾಮಾಜಿಕ ಮೌಲ್ಯಗಳನ್ನು ಬೆಳಸಿದವರು ಇಮಾಂ ಸಾಹೇಬರು. ಈ ನೆಲದಲ್ಲಿ ಎಲ್ಲಿಯಾದರೂ ತುಳಿತಕ್ಕೆ ಒಳಗಾದ ಸಮುದಾಯ, ಜನಪರ ಹೋರಾಟಗಳಾದರೆ ಅಲ್ಲಿ ಲೇಖಕರಾಗಿ, ಹೋರಾಟಗಾರರ ಧ್ವನಿಯಾಗಿ ಜೆಪಿ ಇದ್ದೇ ಇರುತ್ತಾರೆ ಎಂದು ಹೇಳಿದರು.
ಕಾಯಕ್ರಮದಲ್ಲಿ ಜೆ.ಎಂ. ಇಮಾಂ ಟ್ರಸ್ಟ್ ಗೌರವಾಧ್ಯಕ್ಷ ಹಾಜಿ ಜೆ.ಕೆ.ಹುಸೇನ್ಮಿಯ್ಯಾ ಸಾಬ್, ಟ್ರಸ್ಟ್ನ ಅಧ್ಯಕ್ಷ ಎಸ್.ಎಚ್.ಮಸ್ತಾನ್ ಸಾಬ್, ಬಿಇಒ ಈ.ಹಾಲಮೂರ್ತಿ, ಜಲೀಲ್ ಸಾಬ್, ಹಾಜಿ ಜೆ.ಬಿ.ಖಲೀಲ್ ಸಾಬ್, ಜನಪದ ಸಾಹಿತಿ ಡಾ.ನಿಬಗೂರು ರಾಜಪ್ಪ, ಎನ್.ಟಿ.ಎರ್ರಿಸ್ವಾಮಿ, ಡಾ.ಯಾದವರೆಡ್ಡಿ, ಡಿ.ಸಿ.ಮಲ್ಲಿಕಾರ್ಜುನ್, ಬಸವೇಶ್ ಸಿ.ಎಂ.ಹೊಳೆ, ಆಡಳಿತಾಧಿಕಾರಿ ಎ.ಕೆ.ಮಹಮದ್ ಹುಸೇನ್, ಮುಖ್ಯ ಶಿಕ್ಷಕ ಜೆ.ಆರ್.ಶಂಕರ್, ಕಸಾಪ ಅಧ್ಯಕ್ಷೆ ಸುಜಾತಮ್ಮ ರಾಜು, ಬಿ.ಟಿ.ನಾಗರಾಜ್ ಸೇರಿದಂತೆ ಅನೇಕರು ಇದ್ದರು.
01 6ನೇ ಇಮಾಂ ಸ್ಮಾರಕ ಪ್ರಶಸ್ತಿಯನ್ನು ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ನೀಡಿ ಗೌರವಿಸಲಾಯಿತು.